ನವದೆಹಲಿ: ಸೆ. 7 ರಿಂದ ಪ್ರಾರಂಭವಾಗುವ 'ಭಾರತ್ ಜೋಡೋ ಯಾತ್ರೆ'ಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಇದೇ 22 (ಸೋಮವಾರ) ರಂದು ಸಮಾಜದ ಪ್ರತಿನಿಧಿಗಳು, ಬುದ್ಧಿಜೀವಿಗಳು ಮತ್ತು ಬರಹಗಾರರ ಸಭೆಯನ್ನು ನಡೆಸಲಿದೆ.
ಕಾನ್ ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆಯುವ ಸಭೆಯಲ್ಲಿ ಸುಮಾರು 150 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. 150 ದಿನಗಳ 3,500 ಕಿ.ಮೀ ತಡೆರಹಿತ 'ಪಾದಯಾತ್ರೆ'ಯನ್ನು ಸಂಘಟಿಸುತ್ತಿರುವ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಯಾತ್ರೆ ಬಗ್ಗೆ ವಿವರಣೆ ನೀಡುವರು.
ನಾಗರಿಕ ಸಮಾಜ ಸಂಘಟನೆಗಳ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಲು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ.
12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಿರುವ ಯಾತ್ರೆಗೆ ಮೀಸಲಾಗಿರುವ ಲೋಗೋ, ಟ್ಯಾಗ್‌ಲೈನ್ ಮತ್ತು ವೆಬ್‌ಸೈಟ್ ಅನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ.
ಏಳು ಸಂಭವನೀಯ ಮಾರ್ಗಗಳನ್ನು ವಿಶ್ಲೇಷಿಸಿದ ನಂತರ ಯಾತ್ರೆಗೆ ಅಂತಿಮ ಮಾರ್ಗ ನಿಗದಿಪಡಿಸಲಾಗಿದೆ. ಪೂರ್ಣ ಯಾತ್ರೆಯನ್ನು 'ಪಾದಯಾತ್ರೆ' ಎಂದು ಪರಿಗಣಿಸಿ ಮಾರ್ಗ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್, ಚಂಡೀಗಡ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಒಳಗೊಂಡಿದೆ.
ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನು ಪಕ್ಷವು ಬಿಜೆಪಿಯ 'ಭಾರತ್ ಥೋಡೋ' (ಭಾರತ ವಿಭಜಿಸು) ಪ್ರಯತ್ನಗಳಿಗೆ ಪ್ರತ್ಯುತ್ತರವಾಗಿ ಯೋಜಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದ ಕಾರಣದಿಂದ ಸೆ.7 ರಂದು ಆರಂಭವಾಗುವ ಕನ್ಯಾಕುಮಾರಿಯಲ್ಲಿ ಯಾತ್ರೆಯಲ್ಲಿ ಹಾಜರಾಗುವ ಸಾಧ್ಯತೆ ಇಲ್ಲ.
ತಮಿಳುನಾಡಿನಲ್ಲಿ ಮೂರು ದಿನ ಕ್ರಮಿಸಿದ ನಂತರ, ಯಾತ್ರೆಯು ಸೆ. 11 ರಂದು ಕೇರಳ ಪ್ರವೇಶಿಸಲಿದೆ. ಕರ್ನಾಟಕದಲ್ಲಿ 21 ದಿನಗಳಲ್ಲಿ 511 ಕಿ.ಮೀ ಕ್ರಮಿಸಲಿದೆ. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಯಾತ್ರೆಯ ತಲಾ 15-20 ದಿನ ಒಳಗೊಂಡಿರುತ್ತದೆ. 3-5 ದಿನಗಳಲ್ಲಿ ಇತರ ರಾಜ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ.