ಲಖನೌ: ತನ್ನದೇ ಕೃತಕ ಸಾವು ಸೃಷ್ಟಿಸಿ ಜಗತ್ತಿಗೇ ತಾನು ಸತ್ತಂತೆ ಬಿಂಬಿಸಿ ಬಳಿಕ ಬೇರೊಬ್ಬರ ಹೆಸರಿನಲ್ಲಿ ಅಜ್ಞಾತವಾಗಿ ಜೀವಿಸುತ್ತಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ ಓರ್ವನನ್ನು ಮೊರಾದಾಬಾದ್ ಪೊಲೀಸರು ಬರೊಬ್ಬರಿ 7 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಶಾಜಹಾನ್‌ಪುರ ಪೊಲೀಸರು ಮೊರಾದಾಬಾದ್‌ನಲ್ಲಿ ಪೊಲೀಸರು ಮುಖೇಶ್ ಯಾದವ್ ಎಂಬ ಕುಖ್ಯಾತ ಗ್ಯಾಂಗ್ ಸ್ಟರ್ ನನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ವಿಮಾ ಕಂಪನಿಯಿಂದ 1 ಕೋಟಿ ರೂ ಪರಿಹಾರ ಹಣವನ್ನು ಕ್ಲೈಮ್ ಮಾಡಿಕೊಳ್ಳುವ ಸಲುವಾಗಿ ಮುಖೇಶ್ ಯಾದವ್ ತನ್ನದೇ ಸಾವನ್ನು ಸೃಷ್ಟಿಸಿಕೊಂಡಿದ್ದ. ತನ್ನ ಸಾವನ್ನು ತಾನೇ ನಿರ್ವಹಿಸಿಕೊಂಡು ಮೋಸದಿಂದ ಮರಣ ಪ್ರಮಾಣಪತ್ರವನ್ನು ಪಡೆದುಕೊಂಡು ವಿಮಾ ಕಂಪನಿಯಿಂದ 1 ಕೋಟಿ ರೂ ಪರಿಹಾರ ಪಡೆದುಕೊಂಡಿದ್ದ.
ಅಲ್ಲದೆ ಕಳೆದ ಏಳು ವರ್ಷಗಳಿಂದ ಶಹಜಹಾನ್‌ಪುರದಲ್ಲಿ ಹೆಸರು ಬದಲಿಸಿಕೊಂಡು ವಿವಿಧ ವ್ಯವಹಾರಗಳಲ್ಲಿ ವ್ಯವಹರಿಸುತ್ತಾ ಹೊಸ ಹೆಸರಿನೊಂದಿಗೆ ವಾಸಿಸುತ್ತಿದ್ದ. ಈ ಹಿಂದೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಂಪೂರ್ಣ ಸಂಚು ರೂಪಿಸಿದ್ದ. ಈತನ ವಿರುದ್ಧ ಲೂಟಿ, ವಂಚನೆ ಮತ್ತು ಕೊಲೆ, ಸುಲಿಗೆ ಸೇರಿದಂತೆ ಮೊರಾದಾಬಾದ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ತನ್ನದೇ ಸಾವು ಸೃಷ್ಟಿಸಿದ್ದ ಭೂಪ
ಈಗ್ಗೆ 7 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ
ಅನಾಥ ಶವವೊಂದು ಪತ್ತೆಯಾಗಿತ್ತು. ಈ ಶವಕ್ಕೆ ತನ್ನ ಬಟ್ಟೆಗಳನ್ನು ತೊಡಿಸಿ ಮೊಬೈಲ್
ಅನ್ನು ಆ ಬಟ್ಟೆಯೊಳಗಿಟ್ಟು ಆ ಮೃತದೇಹ ತನ್ನದೇ ಎಂಬಂತೆ ಮುಖೇಶ್ ಯಾದವ್ ಬಿಂಬಿಸಿದ್ದ.
ತನ್ನ ಕುಟುಂಬಸ್ಥರೂ ಕೂಡ ಆ ದೇಹವನ್ನು ಮುಖೇಶ್ ನದ್ದೇ ಎಂದು ಸಾಕ್ಷ್ಯ ಹೇಳುವಂತೆ
ಮಾಡಿದ್ದ. ಅಲ್ಲದೆ ಜನರನ್ನು ಮತ್ತು ಸಮಾಜವನ್ನು ನಂಬಿಸಲು ಆ ಅನಾಥ ಶವವನ್ನು
ಕುಟುಂಬಸ್ಥರಿಂದಲೇ ಅಂತ್ಯಕ್ರಿಯೆ ಮಾಡಿಸಿದ್ದ. ಬಳಿಕ ಉತ್ತರಾಖಂಡ ಪೊಲೀಸರು
ಸಿದ್ಧಪಡಿಸಿದ 'ಪಂಚ ನಾಮ'ದ ಆಧಾರದ ಮೇಲೆ ಅವರ ಮರಣ ಪ್ರಮಾಣಪತ್ರವನ್ನು ಕುಟುಂಬವು
ಪಡೆದುಕೊಂಡಿತ್ತು.
ಇದೇ ಪ್ರಮಾಣಪತ್ರದ ಆಧಾರದ ಮೇಲೆ ತನ್ನ ಬೆಂಬಲಿಗರ ಮುಖಾಂತರ ತನ್ನದೇ ಮರಣ ಪ್ರಮಾಣ ಪತ್ರ ಪಡೆದು ವಿಮಾ ಸಂಸ್ಥೆಯಿಂದ ಕೋಟಿ ರೂ ಪರಿಹಾರ ಪಡೆದಿದ್ದ. ಈ ಹಣ ಪಡೆದ ಬಳಿಕ ಯಾದವ್, ತನ್ನ ನೆಲೆಯನ್ನು ಷಹಜಹಾನ್‌ಪುರಕ್ಕೆ ಬದಲಾಯಿಸಿದ್ದ. ಮುನೇಶ್ ಯಾದವ್ ಎಂಬ ಹೊಸ ಗುರುತಿನೊಂದಿಗೆ ಜೀವನವನ್ನು ಪ್ರಾರಂಭಿಸಿದ್ದ. ಏಳು ವರ್ಷಗಳಿಂದ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ರೀ-ಸೇಲ್ ವ್ಯವಹಾರವನ್ನು ಸಹ ಪ್ರಾರಂಭಿಸಿದ್ದ. ಪ್ರಕರಣವೊಂದರ ನಿಮಿತ್ತ ಅಪರಿಚಿತ ಮಹಿಳೆಯೊಬ್ಬರು ಶಹಜಹಾನ್‌ಪುರ ಪೊಲೀಸರನ್ನು ಸಂಪರ್ಕಿಸಿದಾಗ ಮುಖೇಶ್ ಯಾದವ್‌ನ ನಿಜವಾದ ಬಣ್ಣ ಬಯಲಾಗಿದೆ.
ಶಹಜಹಾನ್‌ಪುರ ಪೊಲೀಸ್ ಮೂಲಗಳ ಪ್ರಕಾರ, ಮಹಿಳೆಯಿಂದ ದರೋಡೆಕೋರನ ಬಗ್ಗೆ ಇನ್‌ಪುಟ್‌ಗಳನ್ನು ಪಡೆದ ನಂತರ, ಅಧಿಕಾರಿಗಳು ಅದನ್ನು ಪರಿಶೀಲಿಸಿದರು ಮತ್ತು ಯಾದವ್ ಶಹಜಹಾನ್‌ಪುರದ ರೋಜಾ ಪ್ರದೇಶದಲ್ಲಿ 'ಮುನೇಶ್ ಯಾದವ್' ಎಂದು ವಾಸಿಸುತ್ತಿದ್ದ. ಈ ಬಗ್ಗೆ ಮಾಹಿತಿ ನೀಡಿರುವ ಶಹಜಹಾನ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ), ದರೋಡೆಕೋರನ ವಶದಿಂದ ವಿವಿಧ ವಯಸ್ಸಿನ ಮೂರು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. "ಅವನ ಕ್ರಿಮಿನಲ್ ರುಜುವಾತುಗಳನ್ನು ಮೊರಾದಾಬಾದ್ ಪೊಲೀಸರಿಂದ ಪರಿಶೀಲಿಸಲಾಗಿದೆ ಮತ್ತು ನಿಜವೆಂದು ಕಂಡುಬಂದಿದೆ" ಎಂದು ಹೇಳಿದ್ದಾರೆ.
ಬಂಧಿತ ಯಾದವ್, ಮೊರಾದಾಬಾದ್‌ನಲ್ಲಿ ಖಾಸಗಿ ಭದ್ರತಾ ಏಜೆನ್ಸಿಯನ್ನು ನಡೆಸುತ್ತಿದ್ದ. ಈತ ಕೊಲೆ, ದರೋಡೆ ಮತ್ತು ಲೂಟಿ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಸಿಲುಕಿಕೊಂಡಿದ್ದರು ಎಂದು ಎಎಸ್ಪಿ ಹೇಳಿದ್ದಾರೆ. ಮೇಲಾಗಿ ವಿವಿಧೆಡೆ 50 ಲಕ್ಷ ಸಾಲ ಪಡೆದಿದ್ದ. ಅವನು ಶಿಕ್ಷೆಗೆ ಹೆದರಿ ತನ್ನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಸಾಲವನ್ನು ಮರುಪಾವತಿ ಮಾಡುವುದನ್ನು ತಪ್ಪಿಸಲು ಅವನು ಈ ಸಾವಿನ ಸಂಚು ಹೂಡಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.