ನವದೆಹಲಿ: ಭಾರತ ವಿರೋಧಿ ವಿಚಾರಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಮೂಲದ ಒಂದು ಹಾಗೂ ಭಾರತದ ಏಳು ಯೂಟ್ಯೂಬ್ ಚಾನಲ್ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ವಯ ಕ್ರಮಕೈಗೊಂಡಿರುವುದಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಗುರುವಾರ ತಿಳಿಸಿದೆ.
ಬ್ಲಾಕ್ ಮಾಡಲಾದ ಎಂಟು ಚಾನಲ್ಗಳು ಒಟ್ಟು 114 ಕೋಟಿ ವ್ಯೂವ್, 85,73,000 ಚಂದಾದಾರರನ್ನು ಹೊಂದಿದ್ದವು. ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದ ಆರು ಚಾನಲ್ ಸಹಿತ 16 ವಾಹಿನಿಗಳನ್ನು ಏಪ್ರಿಲ್ನಲ್ಲಿ ಸರ್ಕಾರ ಬ್ಲಾಕ್ ಮಾಡಿತ್ತು. ಈ ಚಾನಲ್ಗಳು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ವ್ಯವಹಾರ ಮತ್ತು ದೇಶದ ಕೋಮು ಸಾಮರಸ್ಯಕ್ಕೆ ಸಂಬಂಧಿಸಿ ಭಾರತದ ವಿರೋದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಸಚಿವಾಲಯ ಆಗ ತಿಳಿಸಿತ್ತು. ಈಗಲೂ ಅದೇ ಆರೋಪದ ಆಧಾರದಲ್ಲಿ ಎಂಟು ಯೂಟ್ಯೂಬ್ ಚಾನಲ್ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ.
ತುರ್ತು ಅಧಿಕಾರ: ಅಪರಾಧಿಕ ಅಂಶಗಳನ್ನು ಬ್ಲಾಕ್ ಮಾಡುವ ಐಟಿ ನಿಯಮಗಳ ತುರ್ತು ಅಧಿಕಾರದ ಆಧಾರದಲ್ಲಿ ಸರ್ಕಾರ ಯೂಟ್ಯೂಬ್ ಚಾನಲ್ಗಳನ್ನು ನಿಷೇಧಿಸಿದೆ. 'ಸುಳ್ಳು ಸುದ್ದಿ ಹರಡುವ ಇಂಥ ಕಂಟೆಂಟ್ಗಳು ಕೋಮು ಸಾಮರಸ್ಯ ಕದಡುವ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಅಪಾಯವಿದೆ' ಎಂದು ಸಚಿವಾಲಯ ಹೇಳಿದೆ. ಸಮಾಜದ ವಿವಿಧ ಗುಂಪುಗಳಲ್ಲಿ ಗಾಬರಿ ಹುಟ್ಟಿಸುವಂಥ 'ಪರಿಶೀಲಿಸದ ಸುದ್ದಿ ಮತ್ತು ವಿಡಿಯೋಗಳನ್ನು' ಚಾನಲ್ಗಳು ಪ್ರಸಾರ ಮಾಡುತ್ತಿವೆ ಎಂಬುದೂ ಸರ್ಕಾರದ ವಿವರಣೆಯಾಗಿದೆ. ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್ಲೈನ್ ಸುದ್ದಿ ಮಾಧ್ಯಮ ಪರಿಸರವನ್ನು ಖಾತರಿಪಡಿಸಲು ಸರ್ಕಾರ ಬದ್ಧವಾಗಿದೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆ, ವಿದೇಶ ಸಂಬಂಧಗಳು ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟುಮಾಡುವ ಪ್ರಯತ್ನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.