ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.
ಬಳಿಕ ಪ್ರಧಾನಿ ಮೋದಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಹುದ್ದೆ ವಹಿಸಿದ ಬಳಿಕ ಪ್ರಧಾನಿ ಮೋದಿ ಸತತ ಒಂಬತ್ತನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಕೇಂದ್ರ ಸರ್ಕಾರವು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ಭಾಷಣದಲ್ಲೇ ಸರ್ಕಾರದ ಪ್ರಮುಖ ಯೋಜನೆಗಳನ್ನು ಘೋಷಿಸುತ್ತಾರೆ. ಕಳೆದ ವರ್ಷ ಅವರು ರಾಷ್ಟ್ರೀಯ 'ಹೈಡ್ರೋಜನ್ ಮಿಷನ್', 'ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್' ಇತ್ಯಾದಿ ಯೋಜನೆಗಳನ್ನು ಘೋಷಿಸಿದ್ದರು.