ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಆರು ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇಕಡ 9ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-4) ಪ್ರಕಾರ, ರಕ್ತಹೀನತೆಯಿಂದ ಬಳಲುವ ಮಕ್ಕಳ ಪ್ರಮಾಣ ಶೇಕಡ 58.6ರಷ್ಟಿತ್ತು. ಆದರೆ 2019-21ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇಕಡ 67.1ಕ್ಕೆ ಏರಿಕೆಯಾಗಿದೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು, 'ಎನ್‌ಎಫ್‌ಎಚ್‌ಎಸ್-5 ಪ್ರಕಾರ ಲಡಾಕ್‌ನಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಗರಿಷ್ಠ ಪ್ರಮಾಣದಲ್ಲಿದೆ(ಶೇ 90ರಷ್ಟು). ನಂತರದಲ್ಲಿ ಗುಜರಾತ್ (ಶೇ 80), ದಾದ್ರಾ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು(ಶೇ 76), ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರ (ಶೇ 73) ಮತ್ತು ಪಂಜಾಬ್ ಮತ್ತು ರಾಜಸ್ಥಾನ (ಶೇ 71) ಇದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಕ್ತಹೀನತೆ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಪೋಷಣ್ ಅಭಿಯಾನವನ್ನು ಆರಂಭಿಸಿದೆ ಎಂದು ತಿಳಿಸಿದರು.