ನವದೆಹಲಿ: ಹೂಡಿಕೆದಾರರು, ಠೇವಣಿದಾರರು ಹಾಗೂ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರು ಮೃತಪಟ್ಟ ನಂತರ ಕ್ಲೇಮು ಮಾಡಿಕೊಳ್ಳದೇ ಇರುವ ಅವರ ಹಣವನ್ನು ಉತ್ತರಾಧಿಕಾರಿಗಳಿಗೆ ತಲುಪಿಸಲು ವಿಧಾನನೊಂದನ್ನು ರೂಪಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಜೆ.ಕೆ.ಮಾಹೇಶ್ವರಿ ಅವರಿದ್ದ ನ್ಯಾಯಪೀಠವು, ಈ ಸಂಬಂಧ ಪತ್ರಕರ್ತೆ ಸುಚೇತಾ ದಲಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
'ಈ ವಿಷಯವು ಮಹತ್ವದ್ದು' ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಕೂಡಲೇ ಪ್ರತಿಕ್ರಿಯೆ ಸಲ್ಲಿಸುವಂತೆ ಆರ್‌ಬಿಐ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೂ ಸೂಚಿಸಿದೆ.
ಹೂಡಿಕೆ, ಠೇವಣಿ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಕ್ಲೇಮು ಮಾಡಿಕೊಳ್ಳದೇ ಇರುವ ಮೊತ್ತ ₹ 40,000 ಕೋಟಿಗೂ ಅಧಿಕ ಎಂದು ಸುಚೇತಾ ದಲಾಲ್ ಅವರು ವಕೀಲ ಪ್ರಶಾಂತಭೂಷಣ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿದ್ದಾರೆ.
'ಮೃತ ಠೇವಣಿದಾರರ ಕುರಿತ ವಿವರಗಳನ್ನು ಒಳಗೊಂಡ ಕೇಂದ್ರೀಕೃತ ವೆಬ್‌ಸೈಟ್ ರೂಪಿಸಬೇಕು ಹಾಗೂ ಆರ್‌ಬಿಐ ಈ ವೆಬ್‌ಸೈಟ್‌ನ ನಿರ್ವಹಣೆ ಮಾಡಬೇಕು. ನಿಷ್ಕ್ರಿಯ ಖಾತೆಗಳಲ್ಲಿನ ಹಣವನ್ನು ಸಂಬಂಧಪಟ್ಟ ವಾರಸುದಾರರು/ನಾಮನಿರ್ದೇಶಿತರು ಯಾವುದೇ ತೊಂದರೆಯಿಲ್ಲದೇ ಪಡೆಯುವಂತಹ ವ್ಯವಸ್ಥೆಯನ್ನು ರೂಪಿಸಬೇಕು' ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.