ಕಾಸರಗೋಡು: ದೇಶದ ಪ್ರಜಾತಂತ್ರ ವ್ಯವಸ್ಥೆ ಭಾರತದ ಖ್ಯಾತಿಯನ್ನು ವಿಶ್ವದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿರುವುದಾಗಿ ಬಂದರು-ಸಂಗ್ರಹಾಲಯ, ಪುರಾತತ್ವ ಖಾತೆ ಸಚಿವ ಅಹ್ಮದ್ ದೇವರ್ ಕೋವಿಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ದೇಶದ ಏಕತೆ ಮತ್ತು ಅಖಂಡತೆಯು ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಪ್ಪು ಹೆಜ್ಜೆಗಳನ್ನು ಪ್ರಜಾಸತ್ತಾತ್ಮಕವಾಗಿ ಸರಿಪಡಿಸಲು ನಾವು ಸಮರ್ಥರಾಗಿದ್ದೇವೆ ಎಂಬ ಅಂಶದಲ್ಲಿ ನಮ್ಮ ಶಕ್ತಿ ಅಡಕವಾಗಿದೆ. ಸಂವಿಧಾನದ ಚೈತನ್ಯ ಕುಸಿಯದಂತೆ ಕಾಪಾಡಿಕೊಂಡು ಬಂದಿರುವುದು ದೇಶದ ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ವಿಶ್ಲೇಶಿಸಿದ ಅವರು, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ನಡೆಸುವ ಮೂಲಕ ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಿದ ಮಹಾನ್ ನಾಯಕರ ಬಗ್ಗೆ ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಾದ ಕರ್ತವ್ಯ ನಮ್ಮೆಲ್ಲರದಾಗಬೇಕು ಎಂದು ತಿಳಿಸಿದರು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ, ವೈಭವ್ ಸಕ್ಸೇನಾ, ಶಾಸಕರಾದ ಎ.ಕೆ.ಎಂ ಅಶ್ರಫ್, ಎನ್.ಎ ನೆಲ್ಲಿಕುನ್ನು, ಸಿ.ಎಚ್. ಕುಞಂಬು, ಇ.ಚಂದ್ರಶೇಖರನ್, ಎಂ. ರಾಜಗೋಪಾಲ್, ಜಿ.ಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್, ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಪಥಸಂಚಲನದ ನಂತರ ನಂತರ ವಿವಿಧ ಕಲಾ, ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಕುಂಬಳೆ ಲಿಟ್ಲ್ ಲಿಲ್ಲಿ ಶಾಲೆಯ ಮಕ್ಕಳಿಂದ ದೇಶಭಕ್ತಿಗೀತೆ, ಕಾಸರಗೋಡು ಜಿಯುಪಿ ಶಾಲೆಮಕ್ಕಳಿಂದ ಕಲಾ ಪ್ರದರ್ಶನ, ಪರವನಡ್ಕ ಎಂ.ಆರ್.ಎಸ್ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿಯನೊಳಗೊಂಡ ಹಾಡುಗಳು, ನೀಲೇಶ್ವರಂ ರಾಜಾಸ್ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಸ್ಕೌಟ್ಸ್-ಗೈಡ್ಸ್ ಪ್ರದರ್ಶನ, ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಉಳಿಯತ್ತಡ್ಕ ಜೈಮಾತಾ ಶಾಲಾ ಮಕ್ಕಳಿಂದ ಕಲಾ ಪ್ರದರ್ಶನ, ದೇಳಿ ಚೂರಕ್ಕೋಡಿ ಕಲರಿ ಸಂಘದ ಕಲರಿಪಯಟ್, ಚಿನ್ಮಯ ವಿದ್ಯಾಲಯದ ಮಕ್ಕಳಿಂದ ರಾಷ್ಟ್ರಗೀತೆ, ಮಧೂರು ನಾಟ್ಯಮಂಟಪ ವತಿಯಿಂದ ನೃತ್ಯ, ಡಾ.ರೂಪಾ ಮತ್ತು ಬಳಗದ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು.