ಕೆಲವರಿಗೆ ಬಾಯಿಯ ಸುತ್ತ, ಅಥವಾ ಬಾಯಿಯ ತುದಿಯ ಎರಡೂ ಕಡೆ ಚರ್ಮ ಕಪ್ಪಗಾಗಿರುತ್ತೆ. ಎಷ್ಟೇ ಮೇಕಪ್ ಮಾಡಿಕೊಂಡರೂ ಆ ಕಪ್ಪಗಾಗಿರುವ ಭಾಗ ಮಾತ್ರ ಎದ್ದು ಕಾಣುತ್ತೆ. ಇದನ್ನು ನಿವಾರಿಸೋಕೆ ಫೇಸ್‌ಪ್ಯಾಕ್, ಮಾಸ್ಕ್ ಏನೆಲ್ಲಾ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಸಾಧ್ಯಾವಗದಿರಬಹುದು. ಮುಂಚೆ ಇಲ್ಲದೇ ಇದ್ದ ಹೈಪರ್‌ಪಿಗ್ಮೆಂಟೇಶನ್ ಈಗ ಕಂಡುಬರಲೂ ಬಹುದು. ಇದಕ್ಕೆ ಕಾರಣವೇನು ಇದನ್ನು ನಿವಾರಿಸೋದು ಹೇಗೆ ಎನ್ನುವ ಮಾಹಿತಿ ಲೇಖನದಲ್ಲಿದೆ.
ಬಾಯಿಯ ಸುತ್ತಲಿನ ಹೈಪರ್‌ಪಿಗ್ಮೆಂಟೇಷನ್ ಕಾರಣಗಳು
ಕನ್ನಡಿಯಲ್ಲಿ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮ್ಮ ತುಟಿ ಹಾಗೂ ಮೂಗಿನ ಮಧ್ಯೆ ಇರುವ ಭಾಗ ಕಪ್ಪಾಗಿ ಮೀಸೆಯಂತೆ ಕಾಣಬಹುದು. ಮುಜುಗರಪಟ್ಟುಕೊಳ್ಳಬೇಡಿ. ಇದು ಹೈಪರ್‌ಪಿಗ್ಮೇಂಟೇಷನ್ ಲಕ್ಷಣ. ತುಟಿಯ ತುದಿಯಲ್ಲಿಯೂ ಈ ಕಪ್ಪು ಕಲೆ ಕೆಲವೊಮ್ಮೆ ಗಾಢವಾಗಿರಬಹುದು. ಆದರೆ ಇದು ಪರ್ಮನೆಂಟ್ ಆಗಿರದು. ಕೆಲವೊಂದು ಆಹಾರ ಅಥವಾ ಇನ್ನಿತರ ಕಾರಣಗಳಿಂದ ಈ ರೀತಿಯ ಕಲೆ ಉಂಟಾಗಬಹುದು. ಆ ಕಾರಣಗಳೇನು ಎನ್ನುವುದಾದರೆ,ಮೊದಲನೆಯದಾಗಿ
ಸೂರ್ಯನ ಬಿಸಿಲು
ಅಧ್ಯಯನಗಳ ಪ್ರಕಾರ ಬಾಯಿಯ ಸುತ್ತಲೂ ಚರ್ಮ ಕಪ್ಪಾಗುವುದು ಹೆಚ್ಚು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಎಂದು ಹೇಳಲಾಗುತ್ತದೆ. ಸೂರ್ಯನ ಬಿಸಿಲಿಗೆ ನೀವು ಸನ್‌ಸ್ಕ್ರೀನ್ ಹಚ್ಚದೇ ಹೋದಾಗ ಬಾಯಿಯ ಬಳಿ ಹೆಚ್ಚಾದ ಮೆಲನಿನ್ ಉತ್ಪಾದನೆಯು ಹೈಪರ್‌ಪಿಗ್ಮೆಂಟೇಷನ್‌ಗೆ ಕಾರಣವಾಗುತ್ತೆ.
ಗಾಯಗಳಿಂದಲೂ ಬಾಯಿಯ ಸುತ್ತಲಿನ ಚರ್ಮ ಕಪ್ಪಾಗಬಹುದು
ಚರ್ಮದ ಬಿರುಕು, ಮೊಡವೆ, ಸೋಂಕು ಮತ್ತು ಸುಟ್ಟಗಾಯಗಳಿಂದ ಚರ್ಮಕ್ಕೆ ಹಾನಿಯಾಗಿ ಹೈಪರ್‌ಪಿಗ್ಮೆಂಟೇಷನ್ ಉಂಟಾಗುತ್ತದೆ. ಬಾಯಿಯ ಸುತ್ತಲಿನ ಚರ್ಮ ಸೂಕ್ಷ್ಮವಾಗಿರುತ್ತದೆ. ಗಾಯಗಳು ಒಣಗಿದರೂ ಕೂಡ ಆ ಚರ್ಮದ ಬಣ್ಣ ಗಾಢವಾಗಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಗಾಢ ಕಪ್ಪು ಬಣ್ಣ ಮಾಸಲು ಹಲವಾರು ತಿಂಗಳಾಗಬಹುದು.
ವಿಟಮಿನ್ ಕೊರತೆ
ದೇಹದಲ್ಲಿ ವಿಟಮಿನ್‌ಗಳ ಕೊರತೆಯಾದಾಗ ಅದರ ಲಕ್ಷಣ ಕಾಣಿಸಿಕೊಳ್ಳೋದು ಚರ್ಮ, ಕೂದಲು ಮತ್ತು ಉಗುರಿನ ಮೂಲಕ. ಕೆಲವೊಮ್ಮೆ ಇಡೀ ಮುಖದಲ್ಲಿನ ಹೈಪರ್‌ಪಿಗ್ಮೆಂಟೇಷನ್ ವಿಟಮಿನ್ ಕೊರತೆಯಿಂದ ಉಂಟಾಗಬಹುದು. ಇದು ನಿಮ್ಮ ತುಟಿಗಳ ಬಳಿ ಇರುವ ಸೂಕ್ಷ್ಮ ಭಾಗಗಳ ಮೇಲೆ ಪರಿಣಾಮ ಬೀರುತ್ತೆ. ಮುಖ್ಯವಾಗಿ ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ಕೊರತೆಯು ಪಿಗ್ಮೆಂಟೇಷನ್ ಹೆಚ್ಚಾಗಲು ಕಾರಣವಾಗುತ್ತೆ. ವಿಟಮಿನ್ ಡಿ ಕೊರತೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಕಡಿಮೆಯಾದಾಗ, ವಿಟಮಿನ್ ಬಿ12 ಕೊರತೆಯು ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗುತ್ತದೆ.
ಕೆಲವೊಂದು ಔಷಧಿ, ಚಿಕಿತ್ಸೆಗಳ ಅಡ್ಡಪರಿಣಾಮ
ಈ ಮೇಲಿನ ಎಲ್ಲಾ ಕಾರಣಗಳನ್ನು ಹೊರತುಪಡಿಸಿ, ಕೆಲವೊಮ್ಮೆ ನೀವು ತೆಗೆದುಕೊಳ್ಳುತ್ತಿರುವ ಔಷಧಿ ಅಥವಾ ಚಿಕಿತ್ಸೆಯ ಪ್ರಭಾವದಿಂದಲೂ ಬಾಯಿಯ ಸುತ್ತಲಿನ ಚರ್ಮ ಕಪ್ಪಾಗಬಹುದು. ಆಂಟಿಬಯೋಟಿಕ್ಸ್, ಕಿಮೋಥೆರಪಿ, ಹಾರ್ಮೋನ್ ಚಿಕಿತ್ಸೆಗಳು ಮತ್ತು ಈಸ್ಟ್ರೋಜೆನ್ ಮಾತ್ರೆಗಳಂತಹ ಕೆಲವೊಂದು ಔಷಧಿಗಳ ಅಡ್ಡಪರಿಣಾಮಗಳಿಂದ ತುಟಿಗಳ ಸುತ್ತ ಹೈಪರ್‌ಪಿಗ್ಮೆಂಟೇಷನ್ ಆಗಬಹುದು.
ಬಂಗು ಇದ್ದಲ್ಲಿಯೂ ಬಾಯಿಯ ಸುತ್ತ ಕಪ್ಪಗಾಗಬಹುದು
ಬಾಯಿಯ ಸುತ್ತ ಚರ್ಮ ಕಪ್ಪಾಗಲು ಗಂಭೀರ ಕಾರಣಗಳಿಲ್ಲದಿದ್ದರೂ, ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳಿಗೆ ಒಳಗಾದಾಗ ಉಂಟಾಗುವ ಬಂಗು ಅಂದರೆ ಮೆಲಾಸ್ಮಾದ ಕಾರಣದಿಂದಲೂ ಚರ್ಮ ಕಪ್ಪಾಗಬಹುದು. ಗರ್ಭಾವಸ್ಥೆಯಲ್ಲಿ ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಹೈಪರ್‌ಪಿಗ್ಮೆಂಟೇಷನ್ ಉಂಟಾಗಬಹುದು. ಇದು ಸೂರ್ಯನ ಬಿಸಿಲಿಗೆ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ಚರ್ಮದ ಬಣ್ಣ ಇನ್ನಷ್ಟು ಗಾಢವಾಗಬಹುದು.
ಲೇಸರ್ ಚಿಕಿತ್ಸೆ
ತುಟಿಯ ಮೇಲಿನ ಕೂದಲಿನ ನಿವಾರಣೆಗೆ ಕೆಲವೊಮ್ಮೆ ಲೇಸರ್ ಚಿಕಿತ್ಸೆ ಅಥವಾ ವ್ಯಾಕ್ಸಿಂಗ್ ಮೊರೆಹೋಗುವುದು ಹೆಚ್ಚು. ಈ ಒಂದು ಕಾರಣದಿಂದಲೂ ಬಾಯಿಯ ಸುತ್ತಲಿನ ಚರ್ಮ ಕಪ್ಪಾಗಬಹುದು. ಲೇಸರ್ ಚಿಕಿತ್ಸೆಯ ನಂರ ಬಳಸುವ ಡರ್ಮಲ್ ಫಿಲ್ಲರ್‌ಗಳು ಉರಿಯೂತದ ನಂತರ ಹೈಪರ್‌ಪಿಗ್ಮೆಂಟೇಷನ್‌ಗೆ ಕಾರಣವಾಗಬಹುದು.
ಎಕ್ಸ್‌ಫೋಲಿಯೇಷನ್ ಬಾಯಿಯ ಸುತ್ತಲಿನ ಕಪ್ಪು ಚರ್ಮವನ್ನು ನಿವಾರಿಸುವುದು
ಹೈಪರ್‌ಪಿಗ್ಮೆಂಟೇಷನ್‌ನಿಂದ ಬಾಯಿಯ ಸುತ್ತಲಿನ ಚರ್ಮ ಕಪ್ಪಾಗಿದ್ದಲ್ಲಿ ಸ್ಕ್ರಬ್ ಕೂಡಾ ಮಾಡಬಹುದು. ಇದು ಮುಖದ ಮೇಲ್ಮೈಯಲ್ಲಿನ ಸತ್ತ ಚರ್ಮದ ಕೋಶಗಳನ್ನು ನಿವಾರಿಸುತ್ತದೆ. ಈ ಸತ್ತಚರ್ಮದ ಜೀವಕೋಶಗಳೇ ಕಪ್ಪು ಕಲೆಗಳಿಗೆ ಕಾರಣವಾಗುತ್ತೆ. ಹೀಗಿದ್ದಾಗ ಡಿ ಟ್ಯಾನ್ ಸ್ಕ್ರಬ್‌ನ ಬಳಕೆಯಿಂದ ಕಳೆದುಕೊಂಡಿರುವ ಚರ್ಮದ ಬಣ್ಣವನ್ನು ಮತ್ತೆ ಪಡೆಯಬಹುದು. ಸ್ಕ್ರಬ್ ಮುಖವನ್ನು ಸ್ವಚ್ಛಗೊಳಿಸುವುದಲ್ಲದೇ ಕಲೆಗಳನ್ನು ಹೆಚ್ಚಿಸುವ ಸನ್‌ಟ್ಯಾನ್, ಕೊಳೆಯನ್ನು ತೆಗೆದುಹಾಕುತ್ತದೆ.
ವಿಟಮಿನ್ ಸಿ ಸೀರಮ್
ಚರ್ಮಕ್ಕೆ ಹೊಳಪು ನೀಡುವ ಸೀರಮ್‌ಗಳು ಬಾಯಿಯ ಸುತ್ತಲಿನ ಪಿಗ್ಮೆಂಟೇಷನ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ಕ್ರಬ್ ಮಾಡಿದ ನಂತರ ಸೀರಮ್ ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಹಾನಿಗೊಳಗಾದ ಚರ್ಮಕ್ಕೆ ಪೋಷಣೆಯನ್ನು ನೀಡುವುದರ ಜೊತೆಗೆ ಮೈಬಣ್ಣ ತಿಳಿಯಾಗುವಂತೆ ಮಾಡುತ್ತದೆ.
ಡಯಟ್ ಫಾಲೋ ಮಾಡಿ
ಪಿಗ್ಮೆಂಟೇಷನ್‌ಗೆ ವಿಟಮಿನ್‌ಗಳ ಕೊರತೆಯೂ ಕಾರಣವಾಗುತ್ತದೆ ಹಾಗಾಗಿ ಈ ವಿಟಮಿನ್ ಕೊರತೆಯನ್ನು ನಿವಾರಿಸಲು ನಿಮ್ಮ ಅನಾರೋಗ್ಯಕರ ಆಹಾರದಿಂದ ಆರೋಗ್ಯಕರ ಡಯಟ್‌ಗೆ ಬದಲಾಯಿಸಿ. ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಹಾಲು, ಕಿತ್ತಳೆ ರಸ, ಮೊಟ್ಟೆ, ಮೊಸರು ಮುಂತಾದ ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಅಳವಡಿಸಿಕೊಳ್ಳಿ.
ರಾಸಾಯನಿಕ ಚಿಕಿತ್ಸೆ
ಈ ಮೇಲೆ ತಿಳಿಸಿದ ಯಾವುದೇ ಕ್ರಮದಿಂದಲೂ ಬಾಯಿಯ ಸುತ್ತಲಿನ ಗಾಢ ಕಪ್ಪು ಬಣ್ಣ ನಿವಾರಣೆಯಾಗದಿದ್ದಲ್ಲಿ ನೀವು ಲೇಸರ್ ಚಿಕಿತ್ಸೆ, ಔಷಧಿ ಅಥವಾ ರಾಸಾಯನಿಕ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಬಹುದು. ಆದರೆ ಈ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಉತ್ತಮ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಈ ಚಿಕಿತ್ಸೆ ಪಡೆದುಕೊಳ್ಳಿ. ಮುಖವು ಕಲೆರಹಿತವಾಗಿ, ಆಕರ್ಷಕ ಹೊಳಪಿನಿಂದ ಕೂಡಿರಬೇಕಾದರೆ ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ಒತ್ತಡಮುಕ್ತ ಜೀವನವೂ ನಿಮ್ಮದಾಗಿರುವಂತೆ ನೋಡಿಕೊಳ್ಳಿ.