ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಿತು.
ಕೇಂದ್ರ
ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜ ಹಾರಿಸಿ,
ನಾಗರಿಕರೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
'ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ಇದು ಎಲ್ಲಾ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ನನ್ನ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇನೆ. ಜೊತೆಗೆ ಹುತಾತ್ಮರಿಗೂ ಗೌರವ ಸಲ್ಲಿಸಿದ್ದೇನೆ' ಎಂದು ಶಾ ಅವರು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು, ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವ ಭೂಪಿಂದರ್ ಯಾದವ್ ಅವರು ಉತ್ತರ ಪ್ರದೇಶದ ಬಲ್ಲಿಯಾಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ಹೊರಾಟಗಾರ ಚಿತ್ತು ಪಾಂಡೆ ಅವರಿಗೆ ಗೌರವ ಸಲ್ಲಿಸಿದರು.
ಹಿಮಾಚಲ ಪ್ರದೇಶದ ಉನಾದಲ್ಲಿ ಹಮ್ಮಿಕೊಂಡಿದ್ದ 'ಪ್ರಭಾತ ಫೇರಿ'ಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಜಭವನದ ಸಿಬ್ಬಂದಿಗೆ ರಾಷ್ಟ್ರಧ್ವಜ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರೊಫೈಲ್ ಚಿತ್ರವಾಗಿ ರಾಷ್ಟ್ರಧ್ವಜ ಬಳಸಿದ ಆರ್‌ಎಸ್‌ಎಸ್: ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವನ್ನು ಶನಿವಾರ ರಾಷ್ಟ್ರಧ್ವಜವಾಗಿ ಬದಲಿಸಿದೆ.
ರಾಷ್ಟ್ರಧ್ವಜದ ಕುರಿತು ಆರ್‌ಎಸ್‌ಎಸ್‌ನ ನಿಲುವಿನ ಬಗ್ಗೆ ಕಾಂಗ್ರೆಸ್ ಹಾಗೂ ಇತರ ವಿರೋಧಪಕ್ಷಗಳು ಟೀಕಿಸಿದ್ದವು.
'52 ವರ್ಷಗಳಿಂದ ನಾಗಪುರದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಆರ್‌ಎಸ್‌ಎಸ್, ಪ್ರೊಫೈಲ್ ಚಿತ್ರವಾಗಿ ರಾಷ್ಟ್ರಧ್ವಜವನ್ನು ಬಳಸಬೇಕೆಂದು ಪ್ರಧಾನಿ ಮೋದಿ ಅವರು ನೀಡಿರುವ ಕರೆಯನ್ನು ಸ್ವೀಕರಿಸುತ್ತದೆಯೇ' ಎಂದು ಈಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.