ಮೀರತ್: ನಗರದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ನೋಯ್ಡಾ ಮೂಲದ ರಾಜಕಾರಣಿ ಶ್ರೀಕಾಂತ್ ತ್ಯಾಗಿಯನ್ನು(Srikant Tyagi) ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದ್ದು, ಅವರನ್ನು ನೋಯ್ಡಾಗೆ (Noida) ಕರೆದೊಯ್ಯಲಾಗುತ್ತದೆ ಎಂದು ವರದಿಯಾಗಿದೆ.
ಇತ್ತೀಚಿಗೆ ವೈರಲ್ ಆದ ವೀಡಿಯೊದಲ್ಲಿ, ತ್ಯಾಗಿ ನೋಯ್ಡಾದ ಸೆಕ್ಟರ್ 93 ರ ಗ್ರಾಂಡ್ ಒಮ್ಯಾಕ್ಸ್‌ನಲ್ಲಿ(Grand Omax) ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡುತ್ತಿರುವುದು ಕಂಡುಬಂದಿತ್ತು ಮತ್ತು ಅಂದಿನಿಂದ ಅವರು ನಾಪತ್ತೆಯಾಗಿದ್ದರು.
ಶುಕ್ರವಾರ ರಾತ್ರಿ ಆತ ಭೂಗತರಾಗುವವರೆಗೂ, ಆಡಳಿತ ಪಕ್ಷವು ತನ್ನೊಂದಿಗೆ ಯಾವುದೇ ಸಂಬಂಧವನ್ನು ನಿರಾಕರಿಸಿದ್ದರೂ ಸಹ, ತಾನು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತ್ಯಾಗಿ ಹೇಳಿಕೊಂಡಿದ್ದ. ಗ್ರ್ಯಾಂಡ್ ಓಮ್ಯಾಕ್ಸ್‌ನಲ್ಲಿರುವ ನೆಲ ಅಂತಸ್ತಿನ ಅಪಾರ್ಟ್‌ಮೆಂಟ್‌ನ ಹೊರಗೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ ಆರೋಪ ತ್ಯಾಗಿ ಮೇಲಿತ್ತು. ಅವನ ಸಹಾಯಕರು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ನುಗ್ಗಿ ಗದ್ದಲ ಸೃಷ್ಟಿಸಿದ ನಂತರ ವಿಷಯವು ಉಲ್ಬಣಗೊಂಡಿತು.
ಸೋಮವಾರ, ಉತ್ತರ ಪ್ರದೇಶ ಸರ್ಕಾರ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿತ್ತು. ಇದೇ ವೇಳೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನೋಯ್ಡಾ ಬಿಜೆಪಿ ನಾಯಕನ (Bjp Leader) ನಿರ್ಮಾಣ ಅಕ್ರಮ ಎಂದು ಬಿಜೆಪಿ ಸರ್ಕಾರಕ್ಕೆ ಇಷ್ಟು ವರ್ಷಗಳವರೆಗೆ ತಿಳಿದಿರಲಿಲ್ಲವೇ? ಬುಲ್ಡೋಝರ್ ಕ್ರಮ ಕೇವಲ ಪ್ರದರ್ಶನಕ್ಕಾಗಿ ಮಾತ್ರ. ಈ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.