ನವದೆಹಲಿ: ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ.
'ಇದು ರೋಗಗ್ರಸ್ಥ ಮನಸ್ಥಿತಿ' ಎಂದು ಅವರು ಕಿಡಿ ಕಾರಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಖಂಡಿಸಿ ಕಾಂಗ್ರೆಸ್ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದರ ಅಂಗವಾಗಿ ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ, ರಾಷ್ಟ್ರಪತಿ ಭವನದತ್ತ ಮೆರವಣಿಗೆ ಹೊರಟರು.
ಕಾಂಗ್ರೆಸ್‌ನ ಪ್ರತಿಭಟನೆಯನ್ನು ಖಂಡಿಸಿದ್ದ ಗೃಹ ಸಚಿವ ಅಮಿತ್ ಶಾ, 'ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿನ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಒಂದು ಧರ್ಮದವರನ್ನು ಓಲೈಸುತ್ತಿದೆ. ಇದರಿಂದ ಶ್ರೀ ರಾಮನಿಗೆ ಅವಮಾನವಾಗಿದೆ' ಎಂದು ಶಾ ಆರೋಪಿಸಿದ್ದರು.
ಅಮಿತ್ ಶಾ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ ಟೀಕಿಸಿದ್ದಾರೆ.
'ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ವಿರುದ್ಧ ಕಾಂಗ್ರೆಸ್‌ನ ಇಂದಿನ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ತಿರುಚಿ, ಧ್ರುವೀಕರಿಸುವ ಮತ್ತು ದುರುದ್ದೇಶಪೂರಿತ ಆಯಾಮ ನೀಡುವ ಹತಾಶ ಪ್ರಯತ್ನವನ್ನು ಗೃಹ ಸಚಿವರು ಮಾಡಿದ್ದಾರೆ. ಇದು ರೋಗಗ್ರಸ್ಥ ಮನಸ್ಥಿತಿ. ನಮ್ಮ ಹೋರಾಟವು ಅಮಿತ್ ಶಾ ಅವರಿಗೆ ನಿಜಯವಾಗಿಯೂ ತಟ್ಟಿದೆ' ಎಂದು ಹೇಳಿದ್ದಾರೆ.