ಕೊಲೊಂಬೊ: ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪೂರಕವಾಗಿ ಭಾರತವು ಕಡಲ ಕಣ್ಗಾವಲು ವಿಮಾನ ಡಾರ್ನಿಯರ್ ಅನ್ನು ಶ್ರೀಲಂಕಾ ನೌಕಾಪಡೆಗೆ ಸೋಮವಾರ ಹಸ್ತಾಂತರಿಸಿದೆ.
ಚೀನಿ ಗೂಢಚಾರಿ ನೌಕೆ ಯುವಾನ್ ವಾಂಗ್, ಶ್ರೀಲಂಕಾದ ಬಂದರು ಪ್ರವೇಶಿಸುವ ಒಂದು ದಿನದ ಮೊದಲು ಭಾರತದ ಅತ್ಯಾಧುನಿಕ ಡಾರ್ನಿಯರ್ ವಿಮಾನವನ್ನು ಶ್ರೀಲಂಕಾ ನೌಕಾಪಡೆಗೆ ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ ಅಡ್ಮಿರಲ್ ಎಸ್.ಎನ್.
ಘೋರ್ಮಡೆ ಹಸ್ತಾಂತರಿಸಿದರು. ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೀನಾದ ಗೂಢಚಾರಿ ನೌಕೆಗೆ ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಆ.11ರಿಂದ ಲಂಗರು ಹಾಕಲು ಅನುಮತಿ ನೀಡಿದ್ದ ಶ್ರೀಲಂಕಾ, ಭಾರತ ತನ್ನ ರಕ್ಷಣಾ ವ್ಯವಸ್ಥೆಯ ಮೇಲೆ ಗೂಢಚಾರಿಕೆ ನಡೆಯುವ ಸಂಭವದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಹೀಗಾಗಿ, ಶ್ರೀಲಂಕಾ, ಚೀನಿ ನೌಕೆಯ ನಿಗದಿತ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ಆರ್ಥಿಕವಾಗಿ ದಿವಾಳಿಯಾಗಿ, ಚೀನಾದ ಸಾಲದ ಬಲೆಯಲ್ಲಿ ಸಿಲುಕಿರುವ ಶ್ರೀಲಂಕಾ ನಂತರದ ಬೆಳವಣಿಗೆಯಲ್ಲಿ ಇದೇ 16ರಿಂದ 22ರವರೆಗೆ ಚೀನಿ ನೌಕೆಗೆ ತನ್ನ ಬಂದರಿನಲ್ಲಿ ಲಂಗರು ಹಾಕಲು ಶ್ರೀಲಂಕಾ ಅನುಮತಿಸಿದೆ.
'ಶ್ರೀಲಂಕಾ ಸಾರ್ವಭೌಮ ರಾಷ್ಟ್ರ. ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಈ ಪ್ರದೇಶದ ಭದ್ರತೆಯ ದೃಷ್ಟಿಯಿಂದ ಭಾರತವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರುಂಧಮ್ ಬಾಗ್ಚಿ ಹೇಳಿದ್ದಾರೆ.