ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಪ್ರವೇಶ ಪತ್ರದಲ್ಲಿ ಹಳೆಯ ದಿನಾಂಕವನ್ನು ನಮೂದಿಸಲಾಗಿದೆ ಎಂದು ಪರೀಕ್ಷೆಯ ಆಕಾಂಕ್ಷಿಗಳು ದೂರಿದ್ದಾರೆ. ಸಿಯುಇಟಿ ಇದೇ ಮೊದಲ ಬಾರಿಗೆ ಆರು ಹಂತದಲ್ಲಿ ನಡೆಯುತ್ತಿದೆ.
ವಿವಿಧ ತೊಡಕಿನ ಕಾರಣ ಈಗಾಗಲೇ ಹಲವು ಕೇಂದ್ರಗಳಲ್ಲಿ ಪರೀಕ್ಷೆ ರದ್ದುಪಡಿಸಲಾಗಿದ್ದರೆ, ಹಲವು ಅಭ್ಯರ್ಥಿಗಳಿಗೆ ಅನ್ವಯಿಸಿ ಪರೀಕ್ಷೆ ಮುಂದೂಡಲಾಗಿದೆ.
ಸದ್ಯ, ಪರೀಕ್ಷೆ ಕುರಿತಂತೆ ನಮಗೆ ಒಂದು ದಿನಾಂಕ ತಿಳಿಸಿದ್ದು, ಪ್ರವೇಶಪತ್ರದಲ್ಲಿ ಬೇರೊಂದು ದಿನಾಂಕ ನಮೂದಿಸಲಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಗೊಂದಲ ಬಗೆಹರಿಸಲು ಪರೀಕ್ಷೆಗೆ ಮತ್ತೊಂದು ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಕೋರಿದ್ದಾರೆ. ವಿದ್ಯಾರ್ಥಿಗಳ ಮನವಿ ಆಧರಿಸಿ ಎನ್‌ಟಿಎ ತೀರ್ಮಾನ ಕೈಗೊಳ್ಳಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ತಿಳಿಸಿದ್ದಾರೆ.