ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ ಜೊಯಿಶ್ ಇರಾನಿ ಅವರ ಬಗ್ಗೆ ʼಆಕ್ಷೇಪಾರ್ಹʼ ಲಿಂಕ್ ಅನ್ನು ತೆಗೆದುಹಾಕುವ ಕಾನೂನು ನಿರ್ದೇಶನಗಳನ್ನು ಗೂಗಲ್ ಅನುಸರಿಸಿದೆ ಎಂದು ಗೂಗಲ್ ಸೋಮವಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಸಚಿವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಗೋವಾ ಅಬಕಾರಿ ಆಯುಕ್ತ ನಾರಾಯಣ್ ಎಂ ಗಡ್ ಅವರು ಅಸ್ಸಾಗಾವೊದಲ್ಲಿರುವ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ಗೆ ಶೋಕಾಸ್ ನೋಟಿಸ್ ನೀಡಿದ ನಂತರ ವಿವಾದ ಭುಗಿಲೆದ್ದಿದೆ. ಜುಲೈ 23 ರಂದು, ಜೋಯಿಶ್ ಇರಾನಿ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಇರಾನಿ ರಾಜೀನಾಮೆಗೆ ಒತ್ತಾಯಿಸಿತು. ಸಚಿವರ ಪುತ್ರಿ ರೆಸ್ಟೋರೆಂಟ್‌ಗೆ ಅಕ್ರಮ ಮದ್ಯದ ಪರವಾನಗಿ ಪಡೆದಿದ್ದಾರೆ ಎಂಬ ವರದಿಗಳನ್ನು ಅದು ಉಲ್ಲೇಖಿಸಿತ್ತು.
ಆದರೂ, ಜುಲೈ 29 ರಂದು, ಸ್ಮೃತಿ ಇರಾನಿ ಮತ್ತು ಜೋಯಿಶ್ ಇರಾನಿ ಅವರು ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ನ ಮಾಲೀಕರಲ್ಲ ಎಂದು ಹೈಕೋರ್ಟು ಪ್ರಾಥಮಿಕವಾಗಿ ಗಮನಿಸಿತ್ತು. ಇರಾನಿ ಮತ್ತು ಅವರ ಮಗಳ ಫೋಟೋಗಳನ್ನು ಮಾರ್ಫಿಂಗ್ (ತಿರುಚಿದ) ಮಾಡಿದ ವೀಡಿಯೊಗಳು ಮತ್ತು ಪೋಸ್ಟ್‌ಗಳ ಕುರಿತಾದ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶಿಸಿದೆ.
ಇರಾನಿ ಅವರು ಗೂಗಲ್ ಸರ್ಚ್ ಇಂಜಿನ್‌ಗೆ ಕೇವಲ ಒಂದು ಲಿಂಕ್ ಅನ್ನು ಮಾತ್ರ ನೀಡಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಗೂಗಲ್ ಅನ್ನು ಪ್ರತಿನಿಧಿಸುವ ವಕೀಲ ಅರವಿಂದ್ ನಿಗಮ್ ನ್ಯಾಯಾಲಯಕ್ಕೆ ತಿಳಿಸಿದರು.
ಸಚಿವರು ಆಕ್ಷೇಪಾರ್ಹ ಲಿಂಕ್‌ಗಳ ಪಟ್ಟಿಯನ್ನು ನೀಡಿದರೆ ಮಾತ್ರ ಇತರ ಆನ್‌ಲೈನ್ ಪೋಸ್ಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಗೂಗಲ್ ಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.