ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ವಿತರಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ನಾಳೆ ಧರಣಿ ನಡೆಸಲಿದ್ದಾರೆ.
ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ವಿತರಕರ ಒಕ್ಕೂಟದ ಇತರ ಸದಸ್ಯರೊಂದಿಗೆ ಜಂತರ್ ಮಂತರ್ ನಲ್ಲಿ ನಾಳೆ ಅವರು ಧರಣಿ ಕೂರುತ್ತಿದ್ದಾರೆ. ಪ್ರಧಾನಿಗೆ ಮನವಿ ಸಲ್ಲಿಸಲಿದ್ದು, ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಲು ಸದಸ್ಯರು ಚಿಂತಿಸಿರುವುದಾಗಿ ಎಐಎಫ್ ಪಿಎಸ್ ಡಿಎಫ್ ತಿಳಿಸಿದೆ.
ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಧಾನ್ಯಗಳ ನಷ್ಟಕ್ಕೆ ಪರಿಹಾರ ನೀಡಬೇಕು, ಅಡುಗೆ ಎಣ್ಣೆ ಮತ್ತು ಬೇಳೆಯನ್ನು ನ್ಯಾಯುಯತ ಅಂಗಡಿಗಳ ಮೂಲಕ ಪೂರೈಕೆ ಮಾಡುವುದು ಸೇರಿದಂತೆ ಒಂಬತ್ತು ಬೇಡಿಕೆಗಳಿವೆ. ಪಶ್ಚಿಮ ಬಂಗಾಳ ರೀತಿಯಲ್ಲಿ ಉಚಿತ ಪಡಿತರ ವಿತರಣೆ ಕಾರ್ಯಕ್ರಮವನ್ನು ದೇಶಾದ್ಯಂತ ಅನುಷ್ಟಾನ ಮಾಡುವಂತೆಯೂ ಒಕ್ಕೂಟ ಆಗ್ರಹಿಸಿದೆ.