ನವದೆಹಲಿ: ಆಕಾಸಾ ಏರ್‌ಲೈನ್ ಸಂಸ್ಥೆಯ ದತ್ತಾಂಶ ಸೋರಿಕೆಯಾಗಿದ್ದು, ಅನಧಿಕೃತ ವ್ಯಕ್ತಿಗಳಿಗೆ ಬಳಕೆದಾರರ ಮಾಹಿತಿ ದೊರೆತಿದೆ.
ಈ ವಿಚಾರವಾಗಿ ಸಂಸ್ಥೆಯು ಗ್ರಾಹಕರ ಕ್ಷಮೆ ಕೇಳಿದ್ದು, 'ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ಪಡೆ (ಸಿಇಆರ್‌ಟಿ-ಇನ್)'ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.
ಲಾಗಿನ್ ಮತ್ತು ಸೈನ್ ಅಪ್ ಸೇವೆಗಳಲ್ಲಿ ಆಗಸ್ಟ್ 25ರಂದು ತಾತ್ಕಾಲಿಕ ತಾಂತ್ರಿಕ ದೋಷ ಕಂಡುಬಂದಿತ್ತು. ಬಳಿಕ ಆಕಾಸಾ ಏರ್‌ಲೈನ್‌ನ ಕೆಲವು ಮಂದಿ ನೋಂದಾಯಿತ ಬಳಕೆದಾರರ ಹೆಸರು, ಇ-ಮೇಲ್ ವಿಳಾಸ ಹಾಗೂ ದೂರವಾಣಿ ವಿವರಗಳು ಸೋರಿಕೆಯಾಗಿವೆ. ಇವುಗಳನ್ನು ಹೊರತುಪಡಿಸಿ ಪ್ರಯಾಣ ಮಾಹಿತಿ ಸೇರಿದಂತೆ ಹೆಚ್ಚಿನ ಯಾವುದೇ ವಿವರ ಸೋರಿಕೆಯಾಗಿಲ್ಲ ಎಂಬ ಬಗ್ಗೆ ಖಾತರಿ ನೀಡುತ್ತಿದ್ದೇವೆ ಎಂದೂ ಸಂಸ್ಥೆ ತಿಳಿಸಿದೆ.
ಆಕಾಸಾ ಏರ್ ಕಂಪನಿಯು ದೇಶದಲ್ಲಿ ಆಗಸ್ಟ್ 7ರಿಂದ ವಿಮಾನಯಾನ ಸೇವೆ ಆರಂಭಿಸಿದೆ.