ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಸೋಮವಾರ ಮೇಘಸ್ಫೋಟ ಸಂಭವಿಸಿದ್ದು, 15 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಹಲವು ಜನರನ್ನು ಮನೆಗಳಿಂದ ಸ್ಥಳಾಂತರ ಮಾಡಲಾಗಿದೆ.
ಭದೋಗ ಮತ್ತು ಕಂಧ್ವಾರ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಮೇಘಸ್ಫೋಟದಿಂದಾಗಿ ದಿಢೀರನೆ ಭಾರಿ ಮಳೆ ಸುರಿದಿದೆ ಎಂದು ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಭದೋಗ ಗ್ರಾಮದಲ್ಲಿ ವಿಜಯ್ ಕುಮಾರ್ (15) ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಕಂಧ್ವಾರ ಗ್ರಾಮದಲ್ಲಿ ಸೇತುವೆಯೊಂದಕ್ಕೆ ಮತ್ತು ಕೃಷಿ ಭೂಮಿಗೂ ಹಾನಿಯಾಗಿದೆ ಎಂದು ಇಲಾಖೆ ಹೇಳಿದೆ. ಸಮೀಪದ ಗುಲೆಲ್ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಐದು ಮನೆಗಳಿಗೆ ಹಾನಿಯಾಗಿದೆ.