ತಿರುವನಂತಪುರ: ಇನ್ಸ್ಟಾಗ್ರಾಂನಲ್ಲಿ ಕಾಲೇಜು ವಿದ್ಯಾರ್ಥಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ, ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪಿಯನ್ನು ಕೇರಳದ ಥಂಪನೂರ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿನೀತ್ (25) ಎಂದು ಗುರುತಿಸಲಾಗಿದೆ. ಈತ ಪ್ರಖ್ಯಾತ ಕೀಝಪೆರೂರ್ ಕೃಷ್ಣ ದೇವಸ್ಥಾನದ ಸಮೀಪದ ಚಿರಾಯಿಂಕೀಜುವಿನ ವೆಲ್ಲಾಲೂರಿನ ನಿವಾಸಿ. ಕಳೆದ ತಿಂಗಳು ಪರವೂರಿನ ವಿದ್ಯಾರ್ಥಿನಿಯೊಬ್ಬಳನ್ನು ಥಂಪನೂರಿನ ಲಾಡ್ಜ್‌ಗೆ ಕರೆತಂದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವಿನೀತ್, ಇನ್ಸ್ಟಾಗ್ರಾನಲ್ಲಿ ತನ್ನನ್ನು ಫಾಲೋ ಮಾಡುವ ಹಾಗೂ ತಾನು ಫಾಲೋ ಮಾಡುವ ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಂಡು, ಫೇಸ್‌ಬುಕ್, ವಾಟ್ಸಾಪ್ ಸಂಪರ್ಕ ಬೆಳೆಸಿ, ಸ್ನೇಹ ಸಾಧಿಸುತ್ತಿದ್ದ. ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ.
ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್ನನ್ನು ಬಂಧಿಸಿ, ಆತನ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಸಹಾಯಕ ಕಮಿಷನರ್ ಶಾಜಿ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್, ಸಬ್ ಇನ್ಸ್‌ಪೆಕ್ಟರ್ ಸುಬಿನ್, ಎಎಸ್‌ಐ ಗೋಪಕುಮಾರ್ ಮತ್ತು ಪೊಲೀಸರಾದ ಸಾಜು, ಅಜಯಕುಮಾರ್, ಸುನೀಲ್ ಮತ್ತು ಅನಿಲ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.