ಕಾಸರಗೋಡು: ಜನತೆಗೆ ಆಮಿಷಗಳನ್ನೊಡ್ಡಿ ಹಣ ಎಗರಿಸುವ ತಂಡವೊಂದು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದುಮುಂಡಿತ್ತಡ್ಕದ ವ್ಯಕ್ತಿಯೊಬ್ಬರಿಂದ ಆರು ಸಾವಿರ ರೂ.ಪಡೆದು ತಲೆಮರೆಸಿಕೊಂಡಿದ್ದಾನೆ. ಇನ್ನೊಂದೆಡೆ ಕುಂಬ್ಡಾಜೆ ಪಾಲಕ್ಕಾರ್ ಎಂಬಲ್ಲಿಂದ 5ಸಾವಿರ ರೂ. ದೋಚಲು ಯತ್ನಿಸಿದ್ದಾನೆ.
ಮುಂಡಿತ್ತಡ್ಕದ ನೂಜಿಲ ನಿವಾಸಿ ರಾಮಣ್ಣ ಎಂಬವರಲ್ಲಿಗೆ ತೆರಳಿದ ಈ ವಂಚಕ, ತಾನು ಬ್ಯಾಂಕ್ ಸಿಬ್ಬಂದಿಯೆಂದು ಪರಿಚಯಿಸಿ ನಿಮಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರಾಗಿದ್ದು, ಆರು ಸಾವಿರ ರೂ. ಬ್ಯಾಂಕಿಗೆ ತುಂಬಿದಲ್ಲಿ ಚೆಕ್ ತಂದುಕೊಡುವುದಾಗಿ ತಿಳಿಸಿದ್ದಾನೆ. ವಂಚನೆ ಅರಿಯದೆ ರಾಮಣ್ಣ ಅವರು ಮನೆಗೆ ತೆರಳಿ ಆರು ಸಾವಿರ ರೂ. ನಗದು ಈತನ ಕೈಗಿತ್ತಿದ್ದಾರೆ. ಸಂಜೆಯಾದರೂ ಚೆಕ್ ತಂದುಕೊಡದ ಹಿನ್ನೆಲೆಯಲ್ಲಿ ವ್ಯಕ್ತಿ ತಿಳಿಸಿದ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ತಾನು ಮೋಸಹೋಗಿರುವುದು ಅರಿವಿಗೆ ಬಂದ ತಕ್ಷಣ ಬದಿಯಡ್ಕ ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ.
ಇದೇ ವ್ಯಕ್ತಿ ಕುಂಬ್ಡಾಜೆ ಪಾಲಕ್ಕಾರ್‍ನ ವ್ಯಕ್ತಿಯೊಬ್ಬರ ಮನೆಗೆ ತೆರಳಿ, ಬ್ಯಾಂಕ್ ನೌಕರನೆಂದು ಪರಿಚಯಿಸಿ, ನಿಮಗೆ ಬ್ಯಾಂಕ್ ಸಾಲ ಮಂಜೂರುಗೊಂಡಿದ್ದು, ಈ ಹಣ ಕೈಸೇರಲು ತುರ್ತಾಗಿ ಐದು ಸಾವಿರ ರೂ. ಬ್ಯಾಂಕಿಗೆ ಪಾವತಿಸುವಂತೆ ತಿಳಿಸಿದ್ದಾನೆ. ಯಜಮಾನ ಮನೆಯಲ್ಲಿಲ್ಲದ ಕಾರಣ ಸಂಜೆ ವಿಷಯ ತಿಳಿಸಿ, ಹಣ ತೆಗೆದಿರಿಸುವುದಾಗಿ ಮಹಿಳೆ ತಿಳಿಸುತ್ತಿದ್ದಂತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಈ ಮಧ್ಯೆ ಮನೆಯಲ್ಲಿದ್ದ ಮಕ್ಕಳು ಈತನ ಫೋಟೋ ಮೊಬೈಲಲ್ಲಿ ಕ್ಲಿಕ್ಕಿಸಿದ್ದಾರೆ. ಮುಂಡಿತ್ತಡ್ಕ ನಿವಾಸಿಯನ್ನು ವಂಚಿಸಿದಾತನೂ ಇದೇ ವ್ಯಕ್ತಿಯಾಗಿದ್ದಾನೆ ಎಂಬುದು ನಂತರ ತಿಳಿದುಬಂದಿದೆ.
ಬ್ಯಾಂಕ್ ನೌಕರನೆಂದು ಹಣ ದೋಚುತ್ತಿದ್ದ ಖದೀಮ
0
ಆಗಸ್ಟ್ 05, 2022