ಲಖಿಂಪುರ ಖೇರಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಅಯೋಗ್ಯ ಎಂದು ಟೀಕಿಸಿದ್ದಾರೆ.
ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದರು.
ಹೀಗಾಗಿ ಮಿಶ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕ್ಯಾಬಿನೆಟ್‌ನಿಂದ ವಜಾಮಾಡಬೇಕು ಎಂದು ಆಗ್ರಹಿಸಿ ಟಿಕಾಯತ್ ನೇತೃತ್ವದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸಿತ್ತು.
ಮಿಶ್ರಾ ಅವರು ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಖೇರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಕಾಯತ್ ಪ್ರತಿಭಟನೆ ಕುರಿತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದಾರೆ.
'ನಾನು ಲಖನೌಗೆ ಕಾರಿನಲ್ಲಿ ಸರಿಯಾದ ವೇಗದಲ್ಲಿ ಸಂಚರಿಸುತ್ತಿದ್ದೇನೆ ಎಂದಿಟ್ಟುಕೊಳ್ಳಿ. ರಸ್ತೆಯಲ್ಲಿ ನಾಯಿಗಳು ಬೊಗಳುತ್ತಾ, ಕಾರನ್ನು ಹಿಂಬಾಲಿಸಿಕೊಂಡು ಬರುತ್ತವೆ. ಅದು ಅವುಗಳ ಸ್ವಭಾವ. ಅಂತಹ ಸ್ವಭಾವ ನಮ್ಮಲ್ಲಿಲ್ಲದ ಕಾರಣ ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ವಿಚಾರಗಳು ಮುನ್ನೆಲೆಗೆ ಬಂದಾಗ ನಾನು ಎಲ್ಲರಿಗೂ ಉತ್ತರ ಕೊಡುತ್ತೇನೆ. ನಿಮ್ಮ ಬೆಂಬಲ ನನ್ನೊಂದಿಗೆ ಇರುವುದರಿಂದ ಆತ್ಮವಿಶ್ವಾಸದಿಂದ ಇದ್ದೇನೆ' ಎಂದು ಅವರು ಹೇಳಿದ್ದಾರೆ.
ಮುಂದುವರಿದು, 'ರಾಕೇಶ್ ಟಿಕಾಯತ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ... ಅಯೋಗ್ಯ. ಅವನು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಎರಡೂ ಸಲ ಠೇವಣಿ ಕಳೆದುಕೊಂಡಿದ್ದಾನೆ. ಇಂತಹ ವ್ಯಕ್ತಿ ನೀಡುವ ಹೇಳಿಕೆಗಳ ಕಡೆಗೆ ಗಮನ ಹರಿಸುವುದಿಲ್ಲ. ನಾನು ನನ್ನ ಜೀವನದಲ್ಲಿ ಯಾವುದೇ ತಪ್ಪು ಮಾಡುವುದಿಲ್ಲ' ಎಂದಿದ್ದಾರೆ.
'ಜನರು ಈ (ಹಿಂಸಾಚಾರದ) ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಪತ್ರಿಕೋದ್ಯಮದೊಂದಿಗೆ ಸಂಬಂಧವೇ ಇಲ್ಲದ ಮೂರ್ಖ ಪತ್ರಕರ್ತರೂ ಇದ್ದಾರೆ. ಅವರು ಆಧಾರವಿಲ್ಲದ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಗೊಂದಲಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿಶ್ರಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಕಾಯತ್, 'ತಮ್ಮ ಮಗ ಜೈಲಿನಲ್ಲಿರುವುದರಿಂದ ಮಿಶ್ರಾ ಅವರು ಕೋಪಗೊಂಡಿದ್ದಾರೆ. ಮಾನಸಿಕ ಸ್ಥಿಮಿತತೆ ಕಾಪಾಡಿಕೊಳ್ಳಲು ಅವರು ಯೋಗ ಮಾಡಬೇಕಿದೆ. ಅವರ ವ್ಯಕ್ತಿತ್ವಕ್ಕೆ ಸರಿಹೊಂದುವಂತೆ ಹೇಳಿಕೆ ನೀಡಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.