ಭಾರತದಲ್ಲಿ ಪ್ರಿಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿವೆ ಎಂಬುದನ್ನು ಇತ್ತೀಚಿನ ಅಂಕಿಅಂಶಗಳು ಸೂಚಿಸುತ್ತವೆ. ಆದ್ದರಿಂದ ಇದನ್ನು ತಡೆಗಟ್ಟಲು ಜಾಗೃತಿ ಮೂಡಿಸುವುದು, ಸಕಾಲಿಕ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ನಿರ್ಣಾಯಕವಾಗಿದೆ. ಡಯಾಬಿಟಿಸ್‌ನಲ್ಲಿ, ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶ (ಗ್ಲೂಕೋಸ್) ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗುತ್ತದೆ.
ಈ ಹೆಚ್ಚಿದ ಗ್ಲೂಕೋಸ್ ಮಟ್ಟವು ನಿಮಗೆ ಟೈಪ್ 2 ಡಯಾಬಿಟಿಸ್ ಇರುವಷ್ಟು ಹೆಚ್ಚಿಲ್ಲದಿದ್ದರೂ, ನೀವು ಪ್ರಿಡಯಾಬಿಟಿಸ್ ಹೊಂದಿರುವಾಗ ಟೈಪ್ 2 ಮಧುಮೇಹ ಸಮಸ್ಯೆ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ. ಉಪವಾಸವಿರುವಾಗ ರಕ್ತದ ಗ್ಲೂಕೋಸ್ 7 mmol/L ಗಿಂತ ಕಡಿಮೆ ಇದ್ದರೆ, ಮೌಖಿಕ ಗ್ಲೂಕೋಸ್ ಸಹಿಷ್ಣುತೆಯ ಪರೀಕ್ಷೆಯ ಎರಡು ಗಂಟೆಗಳ ನಂತರ ರಕ್ತದ ಗ್ಲೂಕೋಸ್ 7.8 mmol/L ಅಥವಾ ಹೆಚ್ಚು ಹಾಗೂ 11.1 mmol/L ಗಿಂತ ಕಡಿಮೆ ಇದ್ದರೆ, ನಿಮಗೆ ಪ್ರಿಡಿಯಾಬಿಟಿಸ್ ಇರುವುದು ಬಹುತೇಕ ಖಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)ಖಾತ್ರಿಪಡಿಸುತ್ತದೆ.
ಬೆಂಗಳೂರಿನ ಸೂರ್ಯ ಎಂಡೋಕ್ರೈನ್ ಕೇಂದ್ರದ ಅಂತಃಸ್ರಾವಶಾಸ್ತ್ರಜ್ಞ ಮತ್ತು ಮಧುಮೇಹಶಾಸ್ತ್ರಜ್ಞ, ಡಾ. ದ್ವಾರಕಾನಾಥ್ ಸಿ.ಎಸ್ M.D., DM (AIIMS) ಮಾತನಾಡಿ, "ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರು, 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ಮಧುಮೇಹ ಹೊಂದಿರುವ ಪೋಷಕರು, ಸಹೋದರ ಅಥವಾ ಸಹೋದರಿಯನ್ನು ಹೊಂದಿರುವವರು, ದೈಹಿಕವಾಗಿ ಸಕ್ರಿಯವಾಗದಿರುವವರು, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಇದ್ದವರಲ್ಲಿ ಪ್ರಿಡಯಾಬಿಟಿಸ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ" ಎಂದು ಹೇಳಿದರು.
ಪ್ ರಿಡಯಾಬಿಟಿಸ್ ಇದ್ದವರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
"ನೀವು ಅಧಿಕ ತೂಕ ಹೊಂದಿದ್ದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಮತ್ತು ನಿಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಹಲವಾರು ವೈದ್ಯಕೀಯ ಪ್ರಯೋಗಗಳು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟಲು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ತಿಳಿಯಲು ಪ್ರಿಡಿಯಾಬಿಟಿಸ್ ಹೊಂದಿರುವ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಯೋಗಿಸಲಾದ ಔಷಧಿಗಳಲ್ಲಿ ಮೆಟ್‌ಫಾರ್ಮಿನ್, ಅಕಾರ್ಬೋಸ್, ಆಂಜಿಯೋಟೆನ್ಸಿನ್-ಪರಿವರ್ತಿಸುವ ಕಿಣ್ವ (ಎಸಿಇ) ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್-II ರಿಸೆಪ್ಟರ್ ವಿರೋಧಿಗಳು (ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್ಸ್ ಎಂದೂ ಕರೆಯುತ್ತಾರೆ) ಎಂಬ ಔಷಧಿಗಳ ಮತ್ತೊಂದು ಗುಂಪು ಸೇರಿವೆ" ಎಂದು ಡಾ. ದ್ವಾರಕಾನಾಥ್ ಸಿ.ಎಸ್ ಹೇಳಿದರು.
ನೀವು ಪ್ರಿಡಿಯಾಬಿಟಿಸ್ ಹೊಂದಿದ್ದರೆ, ನೀವು ಮಧುಮೇಹ ಸಮಸ್ಯೆಯಿಂದ ಬಾಧಿತರಾಗಿಲ್ಲ ಎಂದು ತಿಳಿದುಕೊಳ್ಳಲು ನಿಯಮಿತವಾಗಿ ನಿಮ್ಮ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೃದಯ ರಕ್ತನಾಳದ ಕಾಯಿಲೆ ಹಾಗೂ ಯಾವುದೇ ಇತರ ಅಪಾಯಕಾರಿ ಅಂಶಗಳ ಕುರಿತು ನಿಮ್ಮ ವೈದ್ಯರು ಗಮನವಿಡುವುದು ಅತೀ ಮುಖ್ಯವಾಗಿರುತ್ತದೆ. ಆದ್ದರಿಂದ, ಅವರು ನಿಮ್ಮ ತೂಕ ಮತ್ತು ನಿಮ್ಮ ರಕ್ತದೊತ್ತಡವನ್ನು ಪರೀಕ್ಷೆ ಮಾಡಬಹುದು ಮತ್ತು ನಿಮ್ಮ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸೂಚಿಸಬಹುದು.