ಕಾಸರಗೋಡು: ದೀರ್ಘ ಕಾಲದ ಬೇಡಿಕೆ ಹಾಗೂ ಕಾನೂನು ಹೋರಾಟದ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಲಭಿಸಿದ ರಾತ್ರಿ ಕಾಲದ ಮರಣೋತ್ತರ ಪರೀಕ್ಷಾ ಸೌಲಭ್ಯ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆಗೆ ಅಗತ್ಯ ವೈದ್ಯರ ಸೇವೆ ಜತೆಗೆ ಕೆಲವೊಂದು ಮಾನದಂಡಗಳನ್ನು ನ್ಯಾಯಾಲಯ ನಿರ್ದೇಶಿಸಿದ್ದರೂ, ಇದನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಪ್ರತಿಭಟಿಸಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸದಿರುವ ತೀರ್ಮಾನ ಕೈಗೊಂಡಿದ್ದಾರೆ. ಈ ಸೌಲಭ್ಯ ಆ. 16ರಿಂದ ಮೊಟಕುಗೊಳ್ಳಲಿರುವುದಾಗಿ ವೈದ್ಯರ ಸಂಘಟನೆ ಕೇರಳ ಗವರ್ನಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್ ಸೂಚನೆ ನೀಡಿದೆ. ಈ ಬಗ್ಗೆ ಆಸ್ಪತ್ರೆ ವಠಾರದಲ್ಲಿ ಸಊಚನಾ ಫಲಕವನ್ನೂ ಅಳವಡಿಸಿದೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವ ಕೆಲವೇ ಆಸ್ಪತ್ರೆಗಳ ಪಟ್ಟಿಗೆ ಜನರಲ್ ಆಸ್ಪತ್ರೆ ಸೇರ್ಪಡೆಗೊಂಡಿದೆ. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅವರು ಸರ್ಕಾರಕ್ಕೆ ನಿರಂತರ ಒತ್ತಡ ಹೇರುತ್ತಾ ಬಂದಿರುವುದರ ಜತೆಗೆ ಕಾನೂನಾತ್ಮಕ ಹೋರಾಟಗಳಿಂದ ಈ ಸೌಲಭ್ಯ ಲಭಿಸಿದೆ.
ರಾತ್ರಿ ಹೊತ್ತಲ್ಲಿ ಶವಮಹಜರು ನಡೆಸಲು ಅಗತ್ಯವಿರುವ ವೈದ್ಯರು ಹಾಗೂ ಇತರ ಸಿಬ್ಬಂದಿ ನೇಮಿಸಿಕೊಳ್ಳುವಂತೆ ನ್ಯಾಯಾಲಯ ಶಿಫಾರಸು ಮಾಡಿದ್ದರೂ, ಸರ್ಕಾರ ಈ ನೇಮಕಾತಿಗೆ ಇನ್ನೂ ಸಿದ್ಧವಾಗದಿರುವುದು ರಾತ್ರಿವೇಳೆ ಶವಮಹಜರು ಪ್ರಕ್ರಿಯೆಗೆ ಮಂಕು ಕವಿದಂತಾಗಿದೆ. ಅಗತ್ಯ ಸಿಬ್ಬಂದಿ ಒದಗಿಸದೆ ರಾತ್ರಿವೇಳೆ ಶವಮಹಜರು ಪ್ರಕ್ರಿಎಯಯನ್ನು ಆ. 16ರಿಂದ ಸ್ಥಗಿತಗೊಳಿಸಲಾಗುವುದು. ಸರ್ಕಾರ ಅಗತ್ಯ ಸಿಬ್ಬಂದಿ ನೇಮಕಾತಿ ನಡೆಸಿದ ನಂತರವಷ್ಟೆ ರಾತ್ರಿವೇಳೆ ಶವಮಹಜರು ಕ್ರಿಯೆ ಪುನರಾರಂಭಿಸುವುದಾಗಿ ವೈದ್ಯರುಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ವೈದ್ಯ, ಸಿಬ್ಬಂದಿ ಕೊರತೆ-ಜನರಲ್ ಆಸ್ಪತ್ರೆ ರಾತ್ರಿ ಕಾಲ ಶವಮಹಜರು ಪ್ರಕ್ರಿಯೆ ಸ್ಥಗಿತಗೊಳ್ಳುವ ಸೂಚನೆ
0
ಆಗಸ್ಟ್ 16, 2022