ಹೈದರಾಬಾದ್: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಚಪ್ಪಲಿಗಳನ್ನು ತಂದುಕೊಡುತ್ತಿರುವ ವಿಡಿಯೊವನ್ನು ಸಚಿವ ಕೆ.ಟಿ ರಾಮರಾವ್ (ಕೆಟಿಆರ್) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮಿತ್ ಶಾ ಅವರು ತೆಲಂಗಾಣ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅವರು ಸೋಮವಾರ ದೇವಾಲಯವೊಂದಕ್ಕೆ ಭೇಟಿ ನೀಡಿದ್ದಾರೆ. ದರ್ಶನ ಮುಗಿಸಿ ಹೊರ ಬಂದ ಅಮಿತ್ ಶಾ ಅವರಿಗೆ ಬಂಡಿ ಸಂಜಯ್ ಅವರು ಚಪ್ಪಲಿಗಳನ್ನು ತಂದು ಕೊಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್, 'ದೆಹಲಿಯ 'ಚಪ್ಪಲಿ'ಗಳನ್ನು ಹೊರುವ ಗುಜರಾತಿ ಗುಲಾಮರನ್ನು ತೆಲಂಗಾಣ ಗಮನಿಸುತ್ತಿದೆ. ತೆಲಂಗಾಣದ ಸ್ವಾಭಿಮಾನವನ್ನು ಕೆಣಕುವ, ಅವಹೇಳನ ಮಾಡುವ ಯಾವುದೇ ಪ್ರಯತ್ನವನ್ನು ಹಿಮ್ಮೆಟ್ಟಿಸುತ್ತೇವೆ. ಜೈ ತೆಲಂಗಾಣ' ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರು ಭಾನುವಾರ ಹೈದರಾಬಾದ್‌ನ ಬೇಗುಂಪೇಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನೇರವಾಗಿ ಸಿಕಂದರಾಬಾದ್‌ನ ಉಜ್ಜಯಿನಿ ಮಹಾಂಕಾಳಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಅವರು ಮುನುಗೋಡು ಉಪಚುನಾವಣೆಯ ಸಮಾವೇಶಕ್ಕೆ ತೆರಳಿದರು. ಅಲ್ಲಿ ಮಾತನಾಡಿದ್ದ ಅವರು, ತೆಲಂಗಾಣದ ಟಿಆರ್‌ಎಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿ ಹೇಳಿದ್ದರು.