ಕೊರೊನಾ ಆರಂಭವಾಗಿದ್ದ ಚೀನಾ ನೆಲದಲ್ಲೇ ಇದೀಗ ಹೊಸ ಪ್ರಭೇದದ ಪ್ರಾಣಿಜನ್ಯ ವೈರಸ್ 'ಲಂಗ್ಯಾ' ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಚೀನಾದ ಶಾಂಡೊಂಗ್ ಮತ್ತು ಹೆನನ್ ಪ್ರಾಂತ್ಯಗಳಲ್ಲಿ ಪತ್ತೆಯಾದ ಹೊಸ ಲಂಗ್ಯಾ ಹೆನಿಪಾವೈರಸ್ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಆದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ಬಗ್ಗೆ ವರದಿಯಾಗಿಲ್ಲ. ಈ ವೈರಸ್ ಸಾಂಕ್ರಾಮಿಕವಾಗಿ ಹರಡುವುದೇ ಎನ್ನುವುದರ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಈ ವೈರಸ್ ಕುರಿತಾದ ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ.
ಲಂಗ್ಯಾ ವೈರಸ್‌ನ ಲಕ್ಷಣಗಳು
ಹೊಸ ಲಂಗ್ಯಾ ವೈರಸ್ ಸೋಂಕಿಗೆ ಒಳಗಾದ ಕೆಲವು ರೋಗಿಗಳಲ್ಲಿ ಜ್ವರ, ಆಯಾಸ, ಕೆಮ್ಮು, ಹಸಿವಾಗದಿರುವುದು, ಸ್ನಾಯುಗಳಲ್ಲಿ ನೋವು, ವಾಕರಿಕೆ, ತಲೆನೋವು ಮತ್ತು ವಾಂತಿ ಸೇರಿದಂತೆ ಇತರ ರೋಗಲಕ್ಷಣಗಳು ಕಂಡುಬಂದಿದೆ. ಈ ವೈರಸ್‌ನಿಂದ ಕೆಲವರಲ್ಲಿ ಬಿಳಿ ರಕ್ತಕಣಗಳಲ್ಲಿ ಇಳಿಕೆಯಾಗಿರುವುದನ್ನೂ ಗಮನಿಸಲಾಗಿದೆ. ಜೊತೆಗೆ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಇಳಿಕೆ, ಯಕೃತ್ತಿನ ವೈಫಲ್ಯ ಮತ್ತು ಮೂತ್ರಪಿಂಡ ವೈಫಲ್ಯ ಈ ವೈರಸ್‌ನ ಗಂಭೀರ ಪರಿಣಾಮಗಳಾಗಿದೆ.
ಲಂಗ್ಯಾ ಮಾರಣಾಂತಿಕವೇ..?
ಲಂಗ್ಯಾ ಹೆನಿಪಾವೈರಸ್ 'ನಿಫಾ' ವೈರಸ್ ಅನ್ನು ಹೋಲುತ್ತದೆ ಎನ್ನುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಅಲ್ಲದೇ ಇದು ಹೆನಿಫಾ ವೈರಸ್ ಪ್ರಬೇಧವಾಗಿದ್ದು ಇದು ವಿಶ್ವದ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದಾಗಿದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಮತ್ತು ಸಾವಿನ ಪ್ರಮಾಣವೂ ಶೇಕಡಾ 40 ರಿಂದ 75ರವರೆಗೆ ಇರುತ್ತದೆ. ಆದರೆ ಇದುವರೆಗೂ ಗುರುತಿಸಲಾದ ಲಂಗ್ಯಾ ಪ್ರಕರಣಗಳು ಮಾರಣಾಂತಿಕ ಅಥವಾ ತುಂಬಾ ಗಂಭೀರವೂ ಆಗಿಲ್ಲ.
ಲಂಗ್ಯಾ ಹೆನಿಫಾವೈರಸ್ ಹೆಚ್ಚಾಗಿ ಪ್ರಾಣಿಗಳಲ್ಲಿ ಅದರಲ್ಲೂ ಶ್ರೂ ಎನ್ನುವ ಇಲಿಯನ್ನು ಹೋಲುವ ಪ್ರಾಣಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಬೆಕ್ಕು ಮತ್ತು ನಾಯಿಗಳಲ್ಲಿಯೂ ಈ ವೈರಸ್‌ನ ಪ್ರತಿಕಾಯಗಳು ಪತ್ತೆಯಾಗಿದೆ. ಇದುವರೆಗೂ ಮಾನವರಿಗೆ ಅಪಾಯಕಾರಿಯಾದ ಎರಡು ಜಿನಿಪಾವೈರಸ್‌ಗಳಾದ ನಿಫಾ ಮತ್ತು ಹೆಂಡ್ರಾ ವೈರಸ್‌ಗಳ ಬಗ್ಗೆ ಮಾತ್ರವೇ ತಿಳಿದಿತ್ತು. ಇವೆರಡೂ ಸೋಂಕು ಲಕ್ಷಣರಹಿತ ರೂಪದಲ್ಲಿ ಮತ್ತು ಮಾರಣಾಂತಿಕವಾಗಿ, ಉಸಿರಾಟದ ಸೋಂಕಿನ ರೂಪದಲ್ಲಿ ಕಂಡುಬಂದಿತ್ತು. ಈ ವೈರಸ್‌ಗಳು 75% ನಷ್ಟು ಸಾವಿನ ಪ್ರಮಾಣವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ, ಇದು ಕರೋನವೈರಸ್‌ಗಿಂತ ಹೆಚ್ಚಾಗಿರುತ್ತದೆ. ಇದೀಗ ಲಂಗ್ಯಾ ಹೆನಿಫಾವೈರಸ್‌ನ ಗಂಭೀರತೆಯ ಬಗ್ಗೆ ತಿಳಿದುಬರಬೇಕಷ್ಟೇ.
ಈ ಸೋಂಕು ಸಾಂಕ್ರಾಮಿಕವೆ..?
ಸಧ್ಯಕ್ಕೆ ಮನುಷ್ಯರಿಂದ ಮನುಷ್ಯರಿಗೆ ಸಂಪರ್ಕದ ಮೂಲಕ ಹರಡುವ ವೈರಸ್ ಲಂಗ್ಯಾ ಅಲ್ಲ ಎನ್ನಲಾಗಿದ್ದು. ಈಗಾಗಲೇ ಪತ್ತೆಯಾದ ರೋಗಿಗಳೂ ನಿಕಟ ಸಂಪರ್ಕವನ್ನು ಹೊಂದಿಲ್ಲ ಅಥವಾ ಸಾಮಾನ್ಯವಾಗಿ ಸೋಂಕಿಗೆ ಒಳಗಾದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಒಳಗಾಗದೇಯೂ ಕಂಡುಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ತೈವಾನ್‌ನ ರೋಗ ನಿಯಂತ್ರಣ ಕೇಂದ್ರಗಳು ವೈರಸ್‌ನ ಹರಡುವಿಕೆಯನ್ನು ಗುರುತಿಸಲು ಮತ್ತು ಪರಿಶೀಲಿಸಲು ನ್ಯೂಕ್ಲಿಯಿಡ್ ಆಸಿಡ್ ಪರೀಕ್ಷಾ ವಿಧಾನವನ್ನು ಕೈಗೊಳ್ಳುತ್ತಿದೆ.