ವಯನಾಡ್ : ಅತ್ಯಂತ ಆತಂಕಕಾರಿ ಘಟನೆಯೊಂದರಲ್ಲಿ ಖುದ್ದು ಕಾಂಗ್ರೆಸ್ಸಿಗರೇ ಗಾಂಧಿಯವರ ಫೋಟೋ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಇದು ನಡೆದಿರುವುದು ಖುದ್ದು ಸಂಸದ ರಾಹುಲ್ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ. ಘಟನೆಗೆ ಸಂಬಂಧಿಸಿದಂತೆ ರಾಹುಲ್ಗಾಂಧಿ ಆಪ್ತ ಸಹಾಯಕ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗಿದ್ದೇನೆಂದರೆ, ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದರಾದ ಮೇಲೆ ಕ್ಷೇತ್ರದತ್ತ ಗಮನವನ್ನೇ ಹರಿಸುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡಿದ್ದ ಎಸ್‌ಎಫ್‌ಐ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದರು.
ಇದಾದ ನಂತರ ನೋಡಿದಾಗ ಅಲ್ಲಿರುವ ಪೀಠೋಪಕರಣಗಳು ಧ್ವಂಸಗೊಂಡಿದ್ದವು, ಮಾತ್ರವಲ್ಲದೇ ಗಾಂಧಿಯವರ ಫೋಟೋ ಕೂಡ ಧ್ವಂಸಗೊಂಡಿತ್ತು. ಇದನ್ನು ಮಾಡಿದ್ದು ತಾವೇ ಎಂದು ತಿಳಿದಿದ್ದರೂ ರಾಹುಲ್ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಎಸ್‌ಎಫ್‌ಐ ಕಾರ್ಯಕರ್ತರೇ ಇದನ್ನು ಮಾಡಿರುವುದಾಗಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿತ್ತು. ಗಾಂಧಿಯವರ ಫೋಟೋ ತಾವು ಧ್ವಂಸಗೊಳಿಸಲಿಲ್ಲ, ಬದಲಿಗೆ ಕಾಂಗ್ರೆಸ್ಸಿಗರೇ ಮಾಡಿರುವುದಾಗಿ ಎಸ್‌ಎಫ್‌ಐ ಕಾರ್ಯಕರ್ತರು ಹೇಳಿದ್ದರು.
ನಂತರ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರು ಅಲ್ಲಿದ್ದ ಸಿಸಿಟಿವಿ ಪರೀಕ್ಷೆ ಮಾಡಿದಾಗ ಸತ್ಯಾಂಶ ಬಯಲುಗೊಂಡಿದೆ. ಗಾಂಧಿ ಫೋಟೋ ಅನ್ನು ಖುದ್ದು ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಚೇರಿ ಸಿಬ್ಬಂದಿ ರಾಹುಲ್ ಎಸ್. ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್ ಧ್ವಂಸಗೊಳಿಸಿರುವುದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಖುದ್ದು ಕಾಂಗ್ರೆಸ್ ಕಾರ್ಯಕರ್ತ ರತೀಶ್ ಖುದ್ದಾಗಿ ಸಾಕ್ಷಿ ನುಡಿದಿದ್ದು, ಸತ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಎಸ್‌ಎಫ್‌ಐ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಂಧಿಯವರ ಭಾವಚಿತ್ರಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ ಎನ್ನುವುದು ವಿಡಿಯೋದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಈ ವಿಚಾರವನ್ನಿಟ್ಟುಕೊಂಡು ವ್ಯಾಪಕವಾಗಿ ಪ್ರಚಾರ ಮಾಡಿ ಗಾಂಧಿ ಅವರ ಭಾವಚಿತ್ರಕ್ಕೆ ಎಸ್‌ಎಫ್‌ಐ ಹಾನಿ ಉಂಟು ಮಾಡಿದೆ ಎಂದಿತ್ತು. ಆದರೆ ಇದೀಗ ಸತ್ಯ ಸಾಕ್ಷಿ ಸಹಿತ ಬಯಲುಗೊಂಡಿದೆ