ಕೊಚ್ಚಿ: ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ, ಯುವಕನ ಮೊಬೈಲ್ ಫೋನ್, ಹಣ ಮತ್ತು ಒಡವೆಯನ್ನು ದೋಚಿದ್ದ ಖತರ್ನಾಕ್ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್. ಅನ್ಶದ್ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ವಿವರಣೆಗೆ ಬರುವುದಾದರೆ, 34 ವರ್ಷದ ಸಂತ್ರಸ್ತ ಯುವಕ ಕೊಟ್ಟಾಯಂನ ವೈಕ್ಕೊಮ್ ನಿವಾಸಿ. ಸಂತ್ರಸ್ತನಿಗೆ ಆರೋಪಿ ಹಸೀನಾ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಇಬ್ಬರು ನಿರಂತರವಾಗಿ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದರು. ಇದೇ ಸಲುಗೆಯಲ್ಲಿ ಹಸೀನಾ, ಯುವಕನನ್ನು ಎರ್ನಾಕುಲಂ ಜನರಲ್ ಹಾಸ್ಪಿಟಲ್ ಬಳಿಯಿರುವ ಲಾಡ್ಜ್ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತು ನಂಬಿದ ಯುವಕ ಅಂದು ಲಾಡ್ಜ್ನ ರೂಮ್ ನಂಬರ್ 205ಕ್ಕೆ ತೆರಳಿದ್ದ. ಕೊಠಡಿಯ ಒಳಗೆ ಹೋಗುತ್ತಿದ್ದಂತೆ ಹಸೀನಾ ಮತ್ತು ಇತರೆ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದರು. ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದರು. ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್ಲೆಟ್, ರಿಂಗ್ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಪಾಕೆಟ್ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದರು. ಇಷ್ಟೇ ಅಲ್ಲದೆ, ಆತನ ಫೋನ್ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.