ಅಹಮದಾಬಾದ್: ಪೊಲೀಸರಿಗೆ ಅವರ ಸಮವಸ್ತ್ರದ ಭಾಗವಾಗಿರುವ ಬೆಲ್ಟ್ ಮತ್ತು ಕ್ಯಾಪ್ ಇದ್ದರೇನೇ ಗೌರವ. ಪೊಲೀಸ್ ಎಂದು ಗುರುತಿಸಿಕೊಳ್ಳುವುದು ಇವುಗಳ ಮೂಲಕವಾಗಿಯೇ. ಆದರೆ ಕೋರ್ಟ್ ಮಾತನ್ನು ಕೇಳದ ಪೊಲೀಸರಿಗೆ ಬೆಲ್ಟ್, ಕ್ಯಾಪ್ ತೆಗೆಸಿ ಆರೋಪಿಗಳ ಜತೆಯೇ ಕೋರ್ಟ್ನಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ ಗುಜರಾತ್ನ ಮಿರ್ಜಾಪುರದ ಅಹಮದಾಬಾದ್ ಗ್ರಾಮಾಂತರ ಕೋರ್ಟ್!
ಸಾಮಾನ್ಯವಾಗಿ ಎಲ್ಲಾ ಕೋರ್ಟ್ಗಳಲ್ಲಿ ಆರೋಪಿಗಳನ್ನು ಹಾಜರುಪಡಿಸಿದಾಗ ಅವರನ್ನು ಕೊನೆಯ ಸಾಲಿನಲ್ಲಿ ಕುಳ್ಳರಿಸಲಾಗುತ್ತದೆ. ಅದರಂತೆ ಕೋರ್ಟ್ ಆ ಆರೋಪಿಗಳ ಜತೆಗೆ ಪೊಲೀಸರನ್ನು ಕೆಲವು ಗಂಟೆಗಳ ಕಾಲ ಕೋರ್ಟ್ನಲ್ಲಿ ಕುಳ್ಳರಿಸಿದೆ.
ಆಗಿದ್ದೇನೆಂದರೆ, ಕೆಲವೊಂದು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡುತ್ತದೆ. ಅದರಂತೆಯೇ ಈ ಕೋರ್ಟ್ನಿಂದಲೂ ಕೆಲವು ಪೊಲೀಸರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅವರು ಕೋರ್ಟ್ ಹೇಳಿದ ದಿನ ಹಾಜರು ಆಗಿ ಕೇಸ್ ನಡೆಯುತ್ತಿರುವಾಗ ತಮ್ಮ ಉತ್ತರವನ್ನು ಹೇಳಬೇಕಿತ್ತು. ಆದರೆ ಕೆಲವು ಪ್ರಕರಣಗಳಲ್ಲಿ ಪೊಲೀಸರು ಗೈರಾಗುತ್ತಿದ್ದರು. ಪದೇ ಪದೇ ಕೋರ್ಟ್ನಿಂದ ಸಮನ್ಸ್ ಜಾರಿಯಾದರೂ ಅದನ್ನು ಪೊಲೀಸರು ನಿರ್ಲಕ್ಷಿಸಿದ್ದರು. ಈ ಕಾರಣದಿಂದ ವಿಚಾರಣೆ ಪ್ರತಿ ಬಾರಿಯೂ ಅನಿವಾರ್ಯವಾಗಿ ಮುಂದಕ್ಕೆ ಹಾಕಬೇಕಿತ್ತು. ಇದರಿಂದಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ವಿಳಂಬವಾಗುತ್ತಿತ್ತು.
ಇದನ್ನು ಕೋರ್ಟ್ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಕೋರ್ಟ್ ಆದೇಶವನ್ನು ಪಾಲನೆ ಮಾಡುವುದನ್ನು ಬಿಟ್ಟು ಕೆಲವು ಪೊಲೀಸರು ದುರ್ವರ್ತನೆ ತೋರುತ್ತಿದ್ದಾರೆ ಎನ್ನುವ ಕಾರಣಕ್ಕೆ ಇಂಥದ್ದೊಂದು ಶಿಕ್ಷೆಯನ್ನು ನೀಡಿದೆ. ರೂಪಾಲಿ ಚೌಕಿಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೆ ಡಿ ಪಟೇಲ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಹಾಜರು ಆಗಿರಲಿಲ್ಲ. ಪದೇ ಪದೇ ಹೀಗೆ ಮಾಡಿದಾಗ ಕೋರ್ಟ್ ಅವರ ವಿರುದ್ಧ ವಾರೆಂಟ್ ಹೊರಡಿಸಿತ್ತು. ಎರಡು ದಿನಗಳ ನಂತರ ಅವರು ಕೋರ್ಟ್ಗೆ ಹಾಜರಾದರು.
ಇದು ನ್ಯಾಯಾಧೀಶರಿಗೆ ಕೋಪ ತರಿಸಿತು. ಹಿಂದೆ ಕೂಡ ಕೆಲ ಪ್ರಕರಣಗಳಲ್ಲಿ ಇದೇ ರೀತಿ ಆಗಿರುವುದು ಅವರ ಗಮನಕ್ಕೆ ಬಂತು. ಆದ್ದರಿಂದ ಪೊಲೀಸ್ ಇನ್ಸ್‌ಪೆಕ್ಟರ್ ಪಟೇಲ್ ಸೇರಿದಂತೆ ನಾಲ್ವರು ಪೊಲೀಸರ ಕ್ಯಾಪ್ ಮತ್ತು ಬೆಲ್ಟ್ ತೆಗೆಸಿ ಆರೋಪಿಗಳ ಜತೆ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದರು.
ಈ ಶಿಕ್ಷೆ ಇತರ ಪೊಲೀಸರಿಗೂ ಮಾದರಿಯಾಗಬೇಕಿದೆ ಎಂದು ಕೋರ್ಟ್ ಹೇಳಿದೆ. ಈ ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರ- ವಿರೋಧಗಳ ಪ್ರತಿಕ್ರಿಯೆ ಬರುತ್ತಿವೆ