ಮಾನಸಿಕ ಶಾಂತಿಗೂ ಮಾನಸಿಕ ಒತ್ತಡಕ್ಕೂ ಒಂಥರಾ ಸಂಬಂಧವಿದೆ. ಎಲ್ಲಿ ಮಾನಸಿಕ ಶಾಂತಿ ಇರುತ್ತೋ ಅಲ್ಲಿ ಒತ್ತಡ ಇರುವುದಿಲ್ಲ. ಎಲ್ಲಿ ಒತ್ತಡವಿರುತ್ತೋ ಅಲ್ಲಿ ಮಾನಸಿಕ ಶಾಂತಿ ಇರುವುದಿಲ್ಲ. ಈಗಿನ ಕಾಲವಂತೂ ಸ್ಪರ್ಧಾತ್ಮಕ ಯುಗ. ಹೆಚ್ಚಿನವರು ಕೆಲಸದ ಒತ್ತಡದಿಂದಲೇ ಬಸವಳಿದು ಹೋಗುತ್ತಾರೆ.
ಆಫೀಸಿಗೆ ಹೋದರೂ ಟೆನ್ಷನ್, ಮನೆಗೆ ಬಂದರೂ ಟೆನ್ಷನ್. ಎಷ್ಟೋ ಬಾರಿ ಕೆಲವರಿಗೆ ಈ ಕೆಲಸಕ್ಕೆ ರಿಸೈನ್ ಮಾಡಿಬಿಡೋಣ ಎಂದೆನಿಸಬಹುದು. ಆದರೆ ಕಮಿಟ್‌ಮೆಂಟ್‌ಗಳಿಂದಾಗಿ ಅದು ಸಾಧ್ಯವಾಗದಿರಬಹುದು. ಆದರೆ ಈ ಲಕ್ಷಣಗಳಂತೂ ಕಂಡು ಬಂದರೆ ನೀವು ಕೆಲಸದಿಂದ ಅಲ್ಪವಿರಾಮ ತೆಗೆದುಕೊಳ್ಳಲೇಬೇಕು. ಆ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಸಮಸ್ಯೆಗಳು ಪರ್ವತವಾಗಬಹುದು. ಆ ಲಕ್ಷಣಗಳು ಯಾವುವು ಎಂದರೆ.
ಸಣ್ಣ ವಿರಾಮದಿಮದಲೂ ನಿಮಗೇನೂ ಉಪಯೋಗವಾಗಿಲ್ಲ ಎಂದೆನಿಸುವುದು
ಕೆಲಸದಿಂದ ಕೆಲವು ಗಂಟೆಗಳ ವಿರಾಮ ಅಥವಾ ಒಂದು ದಿನ ರಜೆ ಹಾಕಿಯೂ ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಸಮಯ ಕಳೆದರೂ, ಸುಸ್ತು ಎನಿಸುವುದು. ಆಯಾಸವಾಗುವುದು ಕಂಡುಬರಬಹುದು. ದೇಹವು ದಣಿದಾಗ ಕಾರ್ಯಚಟುವಟಿಕೆಯಲ್ಲಿ ಇಳಿಕೆಯಾಗುತ್ತೆ. ಸಂಪೂರ್ಣವಾಗಿ ಶಕ್ತಿಗುಂದಿದಂತೆ ಅನಿಸಿದಾಗ ಬಹುಶಃ ಅದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಮೇಲೂ ಪ್ರಭಾವ ಬೀರುತ್ತದೆ. ಇದು ದೀರ್ಘವಾದ ನಿರಾಸಕ್ತಿ ಹಾಗೂ ಬೇರ್ಪಡುವಿಕೆಗೆ ಕಾರಣವಾಗಬಹುದು. ಇದು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಬಳಲುವಂತೆ ಮಾಡಬಹುದು. ವಿರಾಮದಿಂದ ಮತ್ತೆ ಕೆಲಸಕ್ಕೆ ಹಿಂತಿರುಗಲು ಕಷ್ಟವಾಗಬಹುದು. ಈ ರೀತಿ ನಿಮಗನಿಸಿದರೆ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ.
ಕೆಲವೊಮ್ಮೆ ಜಗಳ ಕೆಲವೊಮ್ಮೆ ನಿರ್ಲಿಪ್ತತೆ
ಕೆಲವೊಮ್ಮೆ ಕೆಲಸದ ವಿಚಾರದಲ್ಲಿನ ಒತ್ತಡದಿಂದಾಗಿ ಒಳಗೊಳಗೇ ಕುಗ್ಗಬಹುದು. ಅಥವಾ ಮಾನಸಿಕ ಘರ್ಷಣೆಯನ್ನು ನೀವು ಅನುಭವಿಸಬಹುದು. ಮಾನಸಿಕ ಹೋರಾಟವು ಒಬ್ಬ ವ್ಯಕ್ತಿ ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದರ ಬಗ್ಗೆ ಮಾತ್ರವಲ್ಲ ಒಬ್ಬರ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ದೀರ್ಘಕಾಲದಿಂದ ಅನುಭವಿಸುತ್ತಿರುವ ಒತ್ತಡವು ಅದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ.
ಒತ್ತಡ
ದೇಹವು ಒತ್ತಡಕ್ಕೊಳಗಾದಾಗ ನರವ್ಯವಸ್ತೆಯು ದೇಹವು ತನ್ನ ಶಕ್ತಿಯನ್ನು ಜೀವ ಬೆದರಿಕೆಯಿಂದ ಹೋರಾಡಲು ಮತ್ತು ಶತ್ರುವಿನಿಂದ ಪಲಾಯನ ಮಾಡಲು ಬಳಸುತ್ತದೆ. ಈ ಹಂತದಲ್ಲಿ ಜಗಳಗಳೂ ಆಗಬಹುದು. ಇದು ಇನ್ನಷ್ಟು ನಿಮ್ಮನ್ನು ಮಾನಸಿಕ ಒತ್ತಡಕ್ಕೆ ತಳ್ಳಬಹುದು. ಒತ್ತಡದಿಂದಾಗಿ ನರಮಂಡಲದ ನಿರಂತರ ಕ್ರಿಯಾಶೀಲತೆಯು ದೇಹದ ಇತರ ದೈಹಿಕ ವ್ಯವಸ್ಥೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ದೈಹಿಕ ಸಮಸ್ಯೆ ಹಾಗೂ ಕಣ್ಣೀರು ಹಾಕುವಂತೆಯೂ ಮಾಡಬಹುದು.
ಪ್ರತಿದಿನ ದೀರ್ಘಾವಧಿಯವರೆಗೆ ನಿದ್ದೆ ಮಾಡಿದರೂ ಸುಸ್ತು, ಆಯಾಸ, ಯಾವುದರಲ್ಲೂ ಮನಸ್ಸಿಲ್ಲದಿರುವುದು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳಬೇಕಾದ ಲಕ್ಷಣಗಳು. ನಿಮ್ಮ ದೈಹಿಕ ಪರೀಕ್ಷೆಯಲ್ಲಿ ಏನಿಲ್ಲದಿದ್ದರೂ, ನಿಮ್ಮ ನಿದ್ದೆಯ ಅವಧಿ, ಹಸಿವು, ತೂಕದಲ್ಲಿನ ಬದಲಾವಣೆ, ತಲೆನೋವು, ಹೊಟ್ಟೆನೋವು, ಬೆನ್ನು ಸೆಳೆತ, ನಡುಕ ಮತ್ತು ಆಸಿಡಿಟಿಯಂತಹ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನೀವು ವಿರಾಮ ತೆಗೆದುಕೊಳ್ಳಲೇಬೇಕು.
ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋರಾಟ
ಮನಸ್ಸಿಗೆ ನೆಮ್ಮದಿಯಿಲ್ಲದಿದ್ದಾಗ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಾಧ್ಯವಾಗದು. ಒಂಥರಾ ಗೊಂದಲವಿರುತ್ತದೆ. ಸಕಾರಾತ್ಮಕ ಆಲೋಚನೆ ಮತ್ತು ಪ್ರೇರಣೆಯ ಕೊರತೆಯಾಗಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ ವ್ಯಕ್ತಿಯು ವಿಷಯಗಳ ಬಗ್ಗೆ ನಕಾರಾತ್ಮಕವಾಗಿ ಚಿಂತಿಸಬಹುದು ಅಥವಾ ನಿರಾಶಾವಾದಿಯಾಗಬಹುದು. ಇತರರ ಮಾತುಗಳನ್ನು ಅರ್ಥೈಸಿಕೊಳ್ಳದಿರಬಹುದು.ಯೋಚನೆ ಮಾಡುವಂತಹ ಶಕ್ತಿಯೇ ಇಲ್ಲವೆಂದು ಅನಿಸಿದಾಗ ಖಂಡಿತವಾಗಿಯೂ ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳಬೇಕು.
ಮುಖ್ಯವಾದ ವಿಷಯಗಳನ್ನು ಮರೆಯುವುದು, ಕೆಲಸದ ಮೇಲೆ ಗಮನ ವಹಿಸಲು ಸಾಧ್ಯವಾಗದಿರುವುದು, ಸಮಸ್ಯೆ ಪರಿಹರಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಮಾನಸಿಕ ಒತ್ತಡದಿಂದ ಕಡಿಮೆಯಾಗಬಹುದು. ನನ್ನಿಂದ ತಪ್ಪಾದರೆ ಎನ್ನುವ ಭಾವನೆ, ಪದೇ ಪದೇ ರಜೆ ಮಾಡುವುದು, ಸಾಮಾನ್ಯಕ್ಕಿಂತ ಹೆಚ್ಚು ಕೆರಳುವುದು, ಕೋಪಗೊಳ್ಳುವುದು, ಆತಂಕಕ್ಕೊಳಗಾಗುವ ಲಕ್ಷಣಗಳು ದೈಹಿಕವಾಗಿ ಮಾನಸಿಕವಾಗಿ ನಿಮಗೆ ವಿರಾಮ ಬೇಕು ಎಂದು ಹೇಳುವ ಲಕ್ಷಣಗಳು.
ಪ್ರತಿದಿನ ನಿದ್ರಿಸಲೂ ಸಮಸ್ಯೆ
ಖಿನ್ನತೆ ಮತ್ತು ಆತಂಕ ಸೇರಿದಂತೆ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ನಿಮಗೆ ನಿದ್ದೆ ಮಾಡಲು ಬಿಡದೇ ಇರಬಹುದು. ಖಿನ್ನತೆ ಮತ್ತು ಮಾನಸಿಕ ಕುಸಿತವು ನಿದ್ರೆಗೆ ಭಂಗ ತರಬಹುದು. ನಕಾರಾತ್ಮಕ ಯೋಚನೆಗಳೇ ನಿಮ್ಮನ್ನು ಅರೆಜೀವ ಮಾಡಿಬಿಡಬಹುದು. ದುಃಸ್ವಪ್ನಗಳು ನಿದ್ದೆಗೆ ಅಡ್ಡಿಯುಂಟು ಮಾಡಬಹುದು. ಹೀಗಾದರೆ ಮಾನಸಿಕ ನೆಮ್ಮದಿಗಾಗಿ ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳಬೆಕಾಗುತ್ತೆ.
ಮಾನಸಿಕವಾಗಿ ದಣಿವು
ಹೆಚ್ಚು ಕೆಲಸ, ಒತ್ತಡದಿಂದಾಗಿ ಸದಾ ಯೋಚಿಸುವ ಮನಸ್ಸು ಕೂಡಾ ದಣಿಯಬಹುದು. ಹೀಗಾದಾಗ ಒಂದು ದಿನವಾದರೂ ಮನಸ್ಸಿಗೆ ವಿರಾಮ ನೀಡಲೇಬೇಕು. ಆದರೆ ಇದು ಕೆಲವರಿಗೆ ಸಾಧ್ಯವಾಗದಿರಬಹುದು. ರಜೆಯಲ್ಲೂ ಕೆಲವರು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಮನಸ್ಸಿಗೆ ವಿಶ್ರಾಂತಿ ಇಲ್ಲದಂತಾಗುತ್ತದೆ. ಆಯಾಸಗೊಂಡ ಮನಸ್ಸಿಗೆ ಕೆಲಸ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಒತ್ತಡವು ಅನಾರೋಗ್ಯಕರ ಹಂತ ತಲುಪಿದಾಗ ಈ ಸ್ಥಿತಿ ಬರಬಹುದು. ಇಂತಹ ಪರಿಸ್ಥಿತಿ ನೀವು ಎದುರಿಸುತ್ತಿದ್ದರೆ ಕೆಲಸಕ್ಕೆ ವಿರಾಮ ನೀಡುವುದು ಅತ್ಯಗತ್ಯ
ನಿಮಗೆ ವಿರಾಮ ಬೇಕೆಂದೆನಿಸಿದರೆ ಹೀಗೆ ಮಾಡಿ..
ಈ ಮೇಲೆ ತಿಳಿಸಿದ ಎಲ್ಲಾ ಲಕ್ಷಣಗಳು ನಿಮ್ಮಲ್ಲೂ ಇದೆ, ನಿಮಗೂ ಇದರ ಅನುಭವಾಗುತ್ತಿದೆ ಎಂದರೆ ನೀವು ಕೆಲಸಕ್ಕೆ ಪೂರ್ಣವಿರಾಮ ತೆಗೆದುಕೊಳ್ಳಬೇಕಾಗಿಲ್ಲ. ಕೆಲಸ ಬಿಡುವ ಅಗತ್ಯವೂ ಇಲ್ಲ. ನೀವು ಮಾಡಬೇಕಾದುದು ಇಷ್ಟೇ. ನಿಮ್ಮ ಕಂಪನಿ ಅಥವಾ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಮತ್ತು ವಿಶ್ರಾಂತಿಗೆ ಸಂಬಂಧಿಸಿದಂತೆ ಏನಾದರೂ ನಿಯಮಗಳಿವೆಯಾ ಎನ್ನುವುದನ್ನು ತಿಳಿದುಕೊಳ್ಳಿ. ಅದರಲ್ಲೂ ಕೆಲಸಕ್ಕೆ ಸೇರುವ ಮೊದಲೇ ಈ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಉತ್ತಮ. ವರ್ಷಕ್ಕೆ ಎಷ್ಟು ರಜೆ ಪಡೆಯಬಹುದು, ಪ್ರತಿ ತಿಂಗಳು ರಜೆ ಪಡೆಯಬಹುದೇ ಎನ್ನುವುದನ್ನು ತಿಳಿದುಕೊಳ್ಳಿ.
ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿರುತ್ತದೆ. ನಿಮಗೆ ಒಂದು ತಿಂಗಳು ಅಥವಾ ಎರಡು ತಿಂಗಳ ರಜೆ ಮಾನಸಿಕ ವಿಶ್ರಾಂತಿಗಾಗಿ ಬೇಕು ಎನಿಸಿದರೆ ಹೆಚ್‌ಆರ್ ನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ. ಹೆಚ್ಚಿನ ಕಂಪನಿಗಳು ತಮ್ಮ ಸಂಸ್ಥೆಯ ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುತ್ತವೆ. ಯಾಕೆಂದರೆ ಉದ್ಯೋಗಿಗಳ ಮಾನಸಿಕ ಸ್ಥಿತಿಯೂ ಕಂಪನಿಯ ಬೆಳವಣಿಗೆಯನ್ನು ಆಧರಿಸಿರುತ್ತದೆ.