ನವದೆಹಲಿ: ಪೆಗಾಸಸ್‌ನ ಅನಧಿಕೃತ ಬಳಕೆಯ ಕುರಿತು ತನಿಖೆ ನಡೆಸಲು ನೇಮಿಸಿರುವ ತಾಂತ್ರಿಕ ಸಮಿತಿಯು ಪರೀಕ್ಷಿಸಿದ 29 ಮೊಬೈಲ್ ಫೋನ್‌ಗಳ ಪೈಕಿ ಐದು ಮೊಬೈಲ್ ಫೋನ್‌ಗಳಲ್ಲಿ ಕೆಲವು ಮಾಲ್‌ವೇರ್‌ಗಳು ಕಂಡುಬಂದಿವೆ. ಆದರೆ ಇದು ಇಸ್ರೇಲಿ ಸ್ಪೈವೇರ್ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆರ್‌ವಿ ರವೀಂದ್ರನ್ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ, ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಪೆಗಾಸಸ್ ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ ಎಂಬುದನ್ನು ಗಮನಿಸಿದರು.
ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಯಕರ್ತರ ವಿರುದ್ಧ ಸರ್ಕಾರಿ ಏಜೆನ್ಸಿಗಳಿಂದ ಇಸ್ರೇಲಿ ಸ್ಪೈವೇರ್ ಬಳಕೆಯ ಬಗ್ಗೆ ತನಿಖೆ ನಡೆಸುವಂತೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಪೆಗಾಸಸ್ ವಿವಾದವನ್ನು ಪರಿಶೀಲಿಸಲು ತಾಂತ್ರಿಕ ಮತ್ತು ಮೇಲ್ವಿಚಾರಣಾ ಸಮಿತಿಗಳನ್ನು ನೇಮಿಸಿತು. ಮೇಲ್ವಿಚಾರಣಾ ಸಮಿತಿಯು ಮೂರು ಭಾಗಗಳಲ್ಲಿ 'ಸುದೀರ್ಘ' ವರದಿಯನ್ನು ಸಲ್ಲಿಸಿದೆ ಎಂದು ತ್ರಿಸದಸ್ಯ ಪೀಠ ಹೇಳಿದೆ.
ನಾಗರಿಕರ ಗೌಪ್ಯತೆಯ ಹಕ್ಕನ್ನು ರಕ್ಷಿಸಲು ಮತ್ತು ರಾಷ್ಟ್ರದ ಸೈಬರ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನನ್ನು ತಿದ್ದುಪಡಿ ಮಾಡಲು ಒಂದು ತಂಡ ಸಲಹೆ ನೀಡಿದೆ.
ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸದಿರುವುದನ್ನು ಸಮಿತಿಗಳು ಗಮನಿಸಿವೆ. ನೀವು ಇಲ್ಲಿ ಯಾವ ನಿಲುವನ್ನು ತೆಗೆದುಕೊಂಡಿದ್ದೀರೋ, ನೀವು ಸಮಿತಿಯ ಮುಂದೆಯೂ ಅದೇ ನಿಲುವನ್ನು ತೆಗೆದುಕೊಂಡಿದ್ದೀರಿ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಹೇಳಿದೆ.
ತಾಂತ್ರಿಕ ಸಮಿತಿಯ ವರದಿಯನ್ನು ಉಲ್ಲೇಖಿಸಿದ ಪೀಠ, ತಾಂತ್ರಿಕ ಸಮಿತಿಗೆ ಪರೀಕ್ಷೆಗೆ ಸಲ್ಲಿಸಲಾದ 29 ಫೋನ್‌ಗಳಲ್ಲಿ ಐದರಲ್ಲಿ ಕೆಲವು ರೀತಿಯ ಮಾಲ್‌ವೇರ್‌ಗಳಿವೆ ಎಂದು ಕಂಡುಬಂದಿರುವುದು ಸ್ವಲ್ಪ ಕಾಳಜಿಯ ವಿಷಯವಾಗಿದೆ. ಆದರೆ ಇದು ಪೆಗಾಸಸ್ನಿಂದಾದ ಮಾಲ್ವೇರ್ ಎಂದು ಅರ್ಥವಲ್ಲ ಸಿಜೆಐ ಹೇಳಿದರು.