ಮಂಗಳೂರು: ಇತ್ತೀಚಿನ ಯುವಕರ ಸರಣಿ ಕೊಲೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸರು ಗುರುವಾರ ದ್ವಿಚಕ್ರವಾಹನದ ಹಿಂಬದಿಯಲ್ಲಿ ಪುರುಷ ಪ್ರಯಾಣಿಕರನ್ನು ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು 45 ನಿಮಿಷದೊಳಗೆ ಹಿಂಪಡೆದಿದ್ದಾರೆ.
ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ಪರಾಮರ್ಶನಾ ಸಭೆ ನಡೆಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪುರುಷ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ. ದುಷ್ಕರ್ಮಿಗಳು ಈ ದುಷ್ಕರ್ಮಿಗಳ ಕೊಲೆಯಂತಹ ಹೀನ ಕೃತ್ಯಗಳಲ್ಲಿ ತೊಡಗದಂತೆ ತಡೆಯಲು ಉತ್ತರ ಭಾರತದ ಕೆಲವೆಡೆ ಮತ್ತು ಕೇರಳದ ವೈನಾಡಿನಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ನಿಯಮದ ಆದೇಶವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಸಂಜೆ 4.05 ರಲ್ಲಿ ಹೊರಡಿಸಿದ್ದರು. ಆಗಸ್ಟ್ 5 ರಿಂದ 8ರವರೆಗೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪುರುಷ ಪ್ರಯಾಣಿಕರನ್ನು ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.
ಆದಾಗ್ಯೂ, ಈ ನಿಯಮ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಅನ್ವಯವಾಗಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಂಜೆ 4.45ರಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆದೇಶವನ್ನು ಪೊಲೀಸ್ ಆಯುಕ್ತರು ವಾಪಸ್ ಪಡೆದುಕೊಂಡಿದ್ದಾರೆ.