ನವದೆಹಲಿ: 'ಸುಪ್ರೀಂ ಕೋರ್ಟ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ. ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವೇ ಜಡ್ಜ್‌ಗಳಿಗೆ ವಹಿಸಲಾಗುತ್ತಿದೆ' ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಸಿಬಲ್, ಸುಪ್ರೀಂ ಕೋರ್ಟ್‌ನಿಂದ ಪರಿಹಾರ ದೊರೆಯಲಿದೆ ಎಂಬುದಾಗಿ ನೀವು ಭಾವಿಸಿದರೆ ಅದು ದೊಡ್ಡ ತಪ್ಪು.
50 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿರುವುದಾಗಿ 'ಎಎನ್‌ಐ' ಸುದ್ದಿ ಸಂಸ್ಥೆ ವರದಿ ಮಾಡಿದೆ.
'ಮಹತ್ವದ ತೀರ್ಪು ನೀಡಿದರೂ ಅದು ವಾಸ್ತವಕ್ಕೆ ಸನಿಹದಲ್ಲಿರುವುದಿಲ್ಲ' ಎಂದು ಸಿಬಲ್ ಹೇಳಿದ್ದಾರೆ.
ಸಿಬಲ್ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ವಕೀಲರ ಸಂಘ (ಎಐಬಿಎ) 'ಅವಹೇಳನಕಾರಿ' ಎಂದು ಕರೆದಿದೆ. ದೃಢವಾದ ವ್ಯವಸ್ಥೆಯು ಕಾನೂನಿನಿಂದ ಮಾತ್ರವೇ ಪ್ರೇರಿತವಾಗಿದ್ದು, ಭಾವನೆಗಳಿಂದಲ್ಲ. ಕಪಿಲ್ ಸಿಬಲ್ ಅವರೊಬ್ಬ ಹಿರಿಯ ನ್ಯಾಯವಾದಿ. ನ್ಯಾಯಾಲಯವು ತಮ್ಮ ಅಥವಾ ಸಹೋದ್ಯೋಗಿಗಳ ಸಲ್ಲಿಕೆಗಳನ್ನು ಒಪ್ಪಿಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಲಯ ಮತ್ತು ನ್ಯಾಯಾಧೀಶರ ತೀರ್ಪುಗಳನ್ನು ನಿರಾಕರಿಸುವುದು ಅವರಿಗೆ ಭೂಷಣವಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಡಾ. ಆದೀಶ್ ಸಿ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
'ಯಾರದೋ ವಿರುದ್ಧ ತೀರ್ಪು ಬಂದಾಗ ನ್ಯಾಯಾಧೀಶರು ಪಕ್ಷಪಾತಿ ಎಂದು ಆರೋಪಿಸುವುದು, ನ್ಯಾಯಾಂಗ ವ್ಯವಸ್ಥೆ ವಿಫಲವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುವುದು ಹವ್ಯಾಸವಾಗಿಬಿಟ್ಟಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.