ಪಣಜಿ: ಜನರು ತಮ್ಮ ತಮ್ಮ ಮನೆಗಳ ಮುಂದೆ ಹಾಕಿಕೊಂಡಿರುವ ತಿರಂಗಾ ಬಾವುಟಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳು ಈ ಮೂಲಕ ವಿಸ್ತ್ರತ ಆದೇಶ ಹೊರಡಿಸಲಿದ್ದು, ನಿಯಮಾನುಸಾರ ಜನ ಬಾವುಟಗಳನ್ನು ತೆರವುಗೊಳಿಸಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಾರಂಭದಲ್ಲಿ ಆಗಸ್ಟ್ 13ರಿಂದ 15ರವರೆಗೆ 'ಹರ್ ಘರ್ ತಿರಂಗಾ' ಅಭಿಯಾನ ನಡೆಸಿ ಎಂದು ಕರೆ ಕೊಟ್ಟಿದ್ದರು. ಅವರ ಕರೆಗೆ ಓಗೊಟ್ಟು ಕೋಟ್ಯಂತರ ಜನ ತಮ್ಮ ಮನೆಗಳ ಮುಂದೆ ಬಾವುಟವನ್ನು ಹಾರಿಸುತ್ತಿದ್ದಾರೆ. ಅಭಿಯಾನ ಮುಗಿದರೂ ಕೂಡ ಧ್ವಜ ಸಂಹಿತೆಗೆ ವಿರುದ್ಧವಾಗಿ ಜನ ಮನೆಗಳ ಮುಂದೆ ತಿರಂಗಾ ಹಾಕುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಾವಂತ್ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಂಗವಾಗಿ ಪ್ರಧಾನಿ ಮೋದಿ ಅವರು 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಕರೆ ಕೊಟ್ಟಿದ್ದರು.