ನವದೆಹಲಿ :ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‍ಎಫ್) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಫಿಫಾ ಮಂಗಳವಾರ ಘೋಷಿಸಿದೆ. ಬ್ಯೂರೊ ಆಫ್ ಫಿಫಾ ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಫಿಫಾ ಸ್ಥಾನಮಾನ ಉಲ್ಲಂಘನೆ ಸೇರಿದಂತೆ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ ಎಂದು sports.ndtv.com ವರದಿ ಮಾಡಿದೆ.
ರದ್ದುಪಡಿಸಿರುವ ಎಐಎಫ್‍ಎಫ್ ಆಡಳಿತ ಮಂಡಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಆದೇಶ ಹೊರಡಿಸಿದ ಬಳಿಕ ಮತ್ತು ಫಿಫಾ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಆಡಳಿತಾಧಿಕಾರಿ ಪಡೆದ ಬಳಿಕ ಈ ಅಮಾನತು ಅದೇಶವನ್ನು ವಾಪಾಸು ಪಡೆಯಲಾಗುವುದು ಎಂದು ಫಿಫಾ ಸ್ಪಷ್ಟಪಡಿಸಿದೆ.
ಈ ಅಮಾನತು ಆದೇಶದಿಂದಾಗಿ 2022ರ ಅಕ್ಟೋಬರ್ 11 ರಿಂದ 30ರ ವರೆಗೆ ನಡೆಸಲು ಉದ್ದೇಶಿಸಿದ್ದ ಫಿಫಾ ಯು-17 ಮಹಿಳಾ ವಿಶ್ವಕಪ್ - 2022 ಭಾರತದಲ್ಲಿ ನಡೆಯುವುದು ಅನುಮಾನ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹೆಜ್ಜೆಗಳನ್ನು ಫಿಫಾ ಗಮನಿಸುತ್ತಿದ್ದು, ಈ ವಿಚಾರವನ್ನು ಅಗತ್ಯ ಬಿದ್ದಲ್ಲಿ ಬ್ಯೂರೊ ಆಫ್ ಕೌನ್ಸಿಲ್ ಗಮನಕ್ಕೆ ತರಲಾಗುವುದು ಎಂದು ಸ್ಪಷ್ಟಪಡಿಸಿದೆ. ಫಿಫಾ ನಿರಂತರವಾಗಿ ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಜತೆ ಸಂಪರ್ಕದಲ್ಲಿದೆ. ಈ ಪ್ರಕರಣದಲ್ಲಿ ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಕಟಣೆ ಹೇಳಿದೆ.