ನವದೆಹಲಿ:ಭಾರತದಲ್ಲಿ ಕ್ರಿಶ್ಚಿಯನ್ನರ(Attack on Christians) ಮೇಲಿನ ದಾಳಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಸಲ್ಲಿಸಿರುವ ಮನವಿಯಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ ಎಂದು BarandBench ವರದಿ ಮಾಡಿದೆ.
ಅಫಿಡವಿಟ್‌ನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಆರೋಪಗಳು ಸುಳ್ಳು ಮತ್ತು ಅರ್ಜಿದಾರರು ಉಲ್ಲೇಖಿಸಿದ ಹೆಚ್ಚಿನ ಘಟನೆಗಳನ್ನು ಸುದ್ದಿ ವರದಿಗಳಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದು ಉಲ್ಲೇಖಿಸಿದೆ.
"ಪತ್ರಿಕಾ ವರದಿಗಳು [Thewire.in, Scroll.in, Hindustan Times, Dainik Bhaskar, ಇತ್ಯಾದಿ], 'ಸ್ವತಂತ್ರ' ಆನ್‌ಲೈನ್ ಡೇಟಾಬೇಸ್‌ಗಳು(Independent Online Database) ಮತ್ತು ವಿವಿಧ ಸಂಸ್ಥೆಗಳ ಸಂಶೋಧನೆಗಳ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ" ಎಂದು ಕೇಂದ್ರದ ಅಫಿಡವಿಟ್ ಹೇಳಿದೆ. "ಈ ವರದಿಗಳಲ್ಲಿ ಕ್ರಿಶ್ಚಿಯನ್ ಧರ್ಮೀಯರಿಗೆ ಕಿರುಕುಳ ಎಂದು ಹೇಳಲಾದ ಹೆಚ್ಚಿನ ಘಟನೆಗಳು ಸುಳ್ಳು ಅಥವಾ ತಪ್ಪಾಗಿ ವರದಿ ಮಾಡಲಾಗಿದೆ ಎಂದು ವಿಚಾರಣೆಗಳು ಬಹಿರಂಗಪಡಿಸುತ್ತವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು, "ವೈಯಕ್ತಿಕ ದ್ವೇಷದಿಂದ ಮಾಡಿದ ಕೆಲವು ಅಪರಾಧಗಳಿಗೆ ಅರ್ಜಿಯಲ್ಲಿ ಕೋಮು ಬಣ್ಣ ನೀಡಲಾಗಿದೆ" ಎಂದು ಹೇಳಿದರು ಎಂದು Livelaw ವರದಿ ಮಾಡಿದೆ.
ಕ್ರಿಶ್ಚಿಯನ್ ಧರ್ಮೀಯರ ವಿರುದ್ಧ ದಾಖಲಾಗಿರುವ ಬಹುತೇಕ ದೂರುಗಳನ್ನು ಅರ್ಜಿದಾರರೇ ʼಸಮುದಾಯದ ಸದಸ್ಯರ ಕಿರುಕುಳʼ ಎಂದು ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು.
ಅರ್ಜಿದಾರರು "ದಾರಿ ತಪ್ಪಿಸುವ ಮತ್ತು ಸ್ವಾರ್ಥಯುತ" ಸುದ್ದಿ ವರದಿಗಳನ್ನು ಅವಲಂಬಿಸಿದ್ದಾರೆ ಎಂದು ಕೇಂದ್ರವು ಹೇಳಿದೆ.
"ಕೆಲವು ಸಂಸ್ಥೆಗಳು ಲೇಖನಗಳನ್ನು ಬರೆಯಲು ಪ್ರಾರಂಭಿಸುವುದು ಮತ್ತು ಸ್ವಾರ್ಥಯುತ ವರದಿಗಳನ್ನು ಸ್ವತಃ ಅಥವಾ ಅವರ ಸಹವರ್ತಿಗಳ ಮೂಲಕ ಸಿದ್ಧಪಡಿಸುವುದು ಇತ್ತೀಚಿನ ಪ್ರವೃತ್ತಿಯಾಗಿದೆ" ಎಂದು ಸರ್ಕಾರ ಹೇಳಿದೆ.