ಇಸ್ಲಾಮಾಬಾದ್: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಅಡಿಯಲ್ಲಿ ಅಕ್ಟೋಬರ್‌ನಲ್ಲಿ ಭಾರತ ಆಯೋಜಿಸಲಿರುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕಿಸ್ತಾನವು ಭಾಗಿಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕವಾಯತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾ ತುಕಡಿಗಳು ಒಟ್ಟಿಗೆ ಭಾಗವಹಿಸಲಿವೆ.
ಭಾರತದಲ್ಲಿ ನಡೆಯುತ್ತಿರುವ ಇಂಥ ಕವಾಯತಿನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾಗವಹಿಸುತ್ತಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ದಿನಪತ್ರಿಕೆಯು ವರದಿ ಮಾಡಿದೆ.
ಭಾರತ ಅಧ್ಯಕ್ಷತೆ ವಹಿಸಿರುವ ಎಸ್‌ಸಿಒದ ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ವ್ಯವಸ್ಥೆ (ಆರ್‌ಟಿಎಸ್) ಅನ್ವಯ ಇದು ನಡೆಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಆಸಿಂ ಇಫ್ತಿಕಾರ್ ಅವರನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ.
ಎಸ್‌ಸಿಒ ಸದಸ್ಯ ರಾಷ್ಟ್ರವಾಗಿ ಪಾಕಿಸ್ತಾನವು ಭಾಗವಹಿಸಲಿದೆ. ಹರಿಯಾಣದ ಮಾನೇಸರ್‌ನಲ್ಲಿ ನಡೆಯುವ ಈ ಕವಾಯಿತಿನಲ್ಲಿ ರಷ್ಯಾ, ಚೀನಾ, ಪಾಕಿಸ್ತಾನ, ಇರಾನ್, ಕಜಕಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ
ಕೂಡಾ ಭಾಗವಹಿಸಲಿವೆ ಎಂದು ವರದಿ ತಿಳಿಸಿದೆ.