ನವದೆಹಲಿ :ಈ ವರ್ಷದ ಆರಂಭದಲ್ಲಿ ನಡೆಸಲಾದ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯದ ಅಪರಾಧೀಕರಣವನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಅನುಸರಿಸದಿರುವುದಕ್ಕೆ ರಾಜಕೀಯ ಪಕ್ಷಗಳ ಮುಖ್ಯಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಈ ವಿಷಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ ಹೇಳಿದೆ.
ಸೋನಿಯಾ ಗಾಂಧಿ, ಅರವಿಂದ ಕೇಜ್ರಿವಾಲ್ ಹಾಗೂ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪಕ್ಷಗಳ
ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿ
ನ್ಯಾಯವಾದಿ ಬ್ರಿಜೇಶ್ ಸಿಂಗ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ
ನಡೆಸಿತು.
ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯ ತನ್ನ ಅಭ್ಯರ್ಥಿಗಳ ಕ್ರಿಮಿನಲ್
ಹಿನ್ನೆಲೆ ಘೋಷಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ 2021 ಆಗಸ್ಟ್‌ನಲ್ಲಿ ನೀಡಿದ
ತೀರ್ಪನ್ನು ಈ ಪಕ್ಷಗಳು ಅನುಸರಿಸಿಲ್ಲ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 48 ಗಂಟೆಗಳ ಒಳಗೆ ಅಥವಾ ನಾಮಪತ್ರ ಸಲ್ಲಿಕೆಯ ಮೊದಲ ದಿನಾಂಕಕ್ಕಿಂತ ಕನಿಷ್ಠ ಎರಡು ವಾರಗಳಿಗಿಂತ ಮುನ್ನ ಈ ವಿವರಗಳನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಈ ವಿವರಗಳನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ಸೇರಿದಂತೆ ರಾಜಕೀಯ ಪಕ್ಷಗಳ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವಂತೆ ಹಾಗೂ ಒಂದು ಸ್ಥಳೀಯ ಹಾಗೂ ಇನ್ನೊಂದು ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.