ನವದೆಹಲಿ: ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆಯು 'ಇಂಡಿಯಾ ಕಿ ಉಡಾನ್' ಎಂಬ ಆನ್‌ಲೈನ್ ಕಾರ್ಯಕ್ರಮ ಅನಾವರಣಗೊಳಿಸಿದೆ.
ಗೂಗಲ್‌ನ ಕಲಾ ಮತ್ತು ಸಾಂಸ್ಕೃತಿಕ ವಿಭಾಗ ಈ ಯೋಜನೆ ಕೈಗೊಂಡಿದೆ.
ಸ್ವಾತಂತ್ರ್ಯ ದೊರೆತ ನಂತರ ದೇಶ ಸ್ಥಾಪಿಸಿರುವಂತಹ ಮಹತ್ವದ ಮೈಲಿಗಲ್ಲುಗಳನ್ನು ಸಚಿತ್ರ ವಿವರಣೆಯೊಂದಿಗೆ ಮೆಲುಕು ಹಾಕುವುದು ಇದರ ಉದ್ದೇಶ.
'ಕೇಂದ್ರ ಸರ್ಕಾರದ 'ಆಜಾದಿ ಕಿ ಅಮೃತ ಮಹೋತ್ಸವ' ಕಾರ್ಯಕ್ರಮಕ್ಕೆ ಕೈಜೋಡಿಸುವ ಸಲುವಾಗಿ ಈ ಯೋಜನೆ ಕೈಗೊಳ್ಳಲಾಗಿದೆ. 1947ರ ನಂತರ ಭಾರತವು ವಿಕಸನಗೊಂಡ ಬಗೆ, ಇದಕ್ಕೆ ಕೊಡುಗೆ ನೀಡಿದ ಮಹಾನೀಯರ ಕುರಿತ ವಿವರಗಳನ್ನು 'ಇಂಡಿಯಾ ಕಿ ಉಡಾನ್' ಒಳಗೊಂಡಿರಲಿದೆ. ಒಟ್ಟಾರೆಯಾಗಿ ಸ್ವತಂತ್ರ ಭಾರತದ ಕಥೆ ಹೇಳುವುದು ಇದರ ಉದ್ದೇಶ' ಎಂದು ಗೂಗಲ್ ತಿಳಿಸಿದೆ.
'ಡೂಡಲ್4ಗೂಗಲ್'-2022 ಸ್ಪರ್ಧೆಗೂ ಶುಕ್ರವಾರ ಚಾಲನೆ ನೀಡಲಾಗಿದೆ.
'ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ' ಎಂಬ ವಿಷಯದಡಿ ಸ್ಪರ್ಧೆ ನಡೆಸಲಾಗುತ್ತಿದ್ದು, 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬಹುದು. ವಿಜೇತರಿಗೆ ₹5 ಲಕ್ಷ ವಿದ್ಯಾರ್ಥಿವೇತನ ಹಾಗೂ ಅವರು ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಸಂಸ್ಥೆಗೆ ₹2 ಲಕ್ಷ ತಾಂತ್ರಿಕ ನೆರವು ನೀಡಲಾಗುತ್ತದೆ. ವಿಜೇತರು ರಚಿಸಿರುವ ಕಲಾಕೃತಿಯು ನವೆಂಬರ್ 14ರಂದು ಗೂಗಲ್ ಹೋಂ ಪೇಜ್‌ನಲ್ಲಿ (ಭಾರತ) ಪ್ರಕಟವಾಗಲಿದೆ. ಗುಂಪು ಹಂತದ ನಾಲ್ವರು ವಿಜೇತರಿಗೆ ಹಾಗೂ ಫೈನಲ್ ಪ್ರವೇಶಿಸುವ 15 ಮಂದಿಗೆ ಆಕರ್ಷಕ ಬಹುಮಾನಗಳು ದೊರೆಯಲಿವೆ' ಎಂದೂ ಗೂಗಲ್ ಮಾಹಿತಿ ನೀಡಿದೆ.