ಮೊರೆನಾ: ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರ ಗಾಯಕ್ಕೆ ಕಾಂಡೋಮ್ ವ್ರಾಪರ್ ಸುತ್ತಿ ಬ್ಯಾಂಡೇಜ್ ಹಾಕಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಮೊರೆನಾದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ವೈದ್ಯರು ಕಟ್ಟು ಬಿಚ್ಚಿದಾಗ ಕಾಂಡೋಮ್ ಪಟ್ಟಿ ಕಂಡು ದಂಗಾಗಿದ್ದಾರೆ.
70 ವರ್ಷದ ವೃದ್ಧ ಮಹಿಳೆಗೆ ತಲೆ ಭಾಗದಲ್ಲಾಗಿದ್ದ ಗಾಯಕ್ಕೆ ಪೋರ್ಸಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ಯಾಂಡೇಜ್ ಹಾಕಲಾಗಿತ್ತು. ಈ ವೇಳೆಯೇ ಈ ಯಡವಟ್ಟು ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗತೊಡಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ ರಾಕೇಶ್ ಶರ್ಮಾ ಹೇಳಿದ್ದಾರೆ. ಘಟನೆ ಗಂಭೀರ ವಿಷಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.ಪೋರ್ಸಾ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ.ಪುಷ್ಪೇಂದ್ರ ದಂಡೋತಿಯಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಬ್ಯಾಂಡೇಜ್ ಹಾಕಿದ ನಂತರ ಮಹಿಳೆಗೆ ಜಿಲ್ಲಾ ಆಸ್ಪತ್ರೆಗೆ ತೆರಳುವಂತೆ ಪೋರ್ಸಾದ ಪ್ರಾಥಮಿಕ ಆರೋಗ್ಯದಲ್ಲಿ ಸೂಚಿಸಲಾಗಿತ್ತು.