ಶಿಲ್ಲಾಂಗ್ : ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ನಿರ್ಧಾರವನ್ನು ರದ್ದುಗೊಳಿಸುವಂತೆ ಮೇಘಾಲಯದ 420ಕ್ಕೂ ಅಧಿಕ ನಾಗರಿಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಂಗಳವಾರ ಪತ್ರ ಬರೆದು ಆಗ್ರಹಿಸಿದ್ದಾರೆ.
ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರಕಾರದ ನಡೆ ''ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ, ನ್ಯಾಯವನ್ನು ಕೋರಿ ಹಾಗೂ ನಂಬಿಕೆ ಇರಿಸಿ ಎಂದು ತಿಳಿಸಲಾದ ಪ್ರತಿ ಅತ್ಯಾಚಾರ ಸಂತ್ರಸ್ತೆಯಲ್ಲಿ ಘೋರ ಪರಿಣಾಮ ಉಂಟು ಮಾಡಲಿದೆ'' ಎಂದು ಮೇಘಾಲಯ ನಾಗರಿಕರು ಹಾಗೂ ಇತರರು ರಾಷ್ಟ್ರಪತಿ ಅವರಿಗೆ ರವಾನಿಸಿದ ಪತ್ರದಲ್ಲಿ ಹೇಳಿದ್ದಾರೆ.
ಕ್ಷಮಾದಾನಕ್ಕೆ ಸಲ್ಲಿಸಿದ ಅಪರಾಧಿಗಳ ಅರ್ಜಿಯನ್ನು ಕೂಡ ಪರಿಗಣಿಸುವ ಹಾಗೂ ಅನಂತರ ಅವರನ್ನು ಬಿಡುಗಡೆಗೊಳಿಸುವ ನಿರ್ಧಾರ ಮೋದಿ ಸರಕಾರದ ''ಬೇಟಿ ಬಚಾವೊ ಬೇಟಿ ಪಡಾವೊ'' ಹಾಗೂ ''ಮಿಷನ್ ಶಕ್ತಿ''ಯಂತಹ ಯೋಜನೆಗಳ ಪೊಳ್ಳುತನವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.
ಅಪರಾಧಿಗಳು ಬಿಡುಗಡೆಯಾಗುವುದಕ್ಕಿಂತ ಗಂಟೆಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಉಲ್ಲೇಖಿಸಿರುವುದನ್ನು ಮನವಿದಾರರು ಗಮನ ಸೆಳೆದಿದ್ದಾರೆ.