ನವದೆಹಲಿ :ಭಾರತ-ಪಾಕಿಸ್ತಾನ ನಡುವೆ ವ್ಯಾಪಾರ ಮಾತುಕತೆಗಳ ಪುನರಾರಂಭ ಕುರಿತು 2019ರಿಂದ ಯಾವುದೇ ಪ್ರಗತಿಯಾಗಿಲ್ಲ ಎಂದು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಆಗಸ್ಟ್,2019ರಲ್ಲಿ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳದರ್ಜೆಗಿಳಿಸಲು,ದಿಲ್ಲಿಯಲ್ಲಿಯ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳಲು,ಇಸ್ಲಾಮಾಬಾದ್‌ನಲ್ಲಿಯ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತುಗೊಳಿಸಲು ಪಾಕಿಸ್ತಾನವು ನಿರ್ಧರಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ತೀವ್ರ ಹದಗೆಟ್ಟಿದ್ದವು.
ಪಾಕಿಸ್ತಾನವು 2019,ಆಗಸ್ಟ್‌ನಲ್ಲಿ ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತುಗೊಳಿಸುವುದಾಗಿ ಪ್ರಕಟಿಸಿತ್ತು. 2019,ಸೆಪ್ಟಂಬರ್‌ನಲ್ಲಿ ಕೆಲವು ಔಷಧಿ ಉತ್ಪನ್ನಗಳಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಅದು ಭಾರತದೊಂದಿಗಿನ ವ್ಯಾಪಾರ ನಿಷೇಧವನ್ನು ಭಾಗಶಃ ಸಡಿಲಿಸಿತ್ತು. ಆಗಿನಿಂದ ಪಾಕಿಸ್ತಾನದೊಂದಿಗೆ ವ್ಯಾಪಾರವನ್ನು ಪುನರಾರಂಭಿಸುವ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಲಿಖಿತ ಉತ್ತರದಲ್ಲಿ ಮುರಳೀಧರನ್ ತಿಳಿಸಿದರು.
ಪ್ರತ್ಯೇಕ ಉತ್ತರವೊಂದರಲ್ಲಿ ಮುರಳೀಧರನ್,ಲಭ್ಯ ಮಾಹಿತಿಗಳಂತೆ ಗುಜರಾತಿನ ಸುಮಾರು 546 ಭಾರತೀಯರು ಅಥವಾ ಭಾರತೀಯ ಮೀನುಗಾರರೆಂದು ನಂಬಲಾಗಿರುವವರು ಪಾಕಿಸ್ತಾನದ ವಶದಲ್ಲಿದ್ದಾರೆ. ಪಾಕಿಸ್ತಾನದ ಜಲಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಪಾಕ್ ಅಧಿಕಾರಿಗಳು ಬಂಧಿಸಿ,ಅವರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಪಾಕಿಸ್ತಾನದ ಮೀನುಗಾರಿಕೆ ಕಾಯ್ದೆಯಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ ಎಂದರು.
ಭಾರತೀಯ ಮೀನುಗಾರರ ಕಲ್ಯಾಣ,ಸುರಕ್ಷತೆ ಮತ್ತು ಭದ್ರತೆಗೆ ಸರಕಾರವು ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ, ಭಾರತೀಯ ಮೀನುಗಾರರ ಬಂಧನಗಳು ವರದಿಯಾದ ತಕ್ಷಣ ಇಸ್ಲಾಮಾಬಾದ್‌ನಲ್ಲಿಯ ಭಾರತೀಯ ರಾಯಭಾರ ಕಚೇರಿಯು ಈ ವಿಷಯವನ್ನು ಪಾಕ್ ಸರಕಾರದೊಡನೆ ಕೈಗೆತ್ತಿಕೊಳ್ಳುತ್ತದೆ. ಭಾರತೀಯ ಮೀನುಗಾರರ ತ್ವರಿತ ಬಿಡುಗಡೆ ಮತ್ತು ಅವರ ದೋಣಿಗಳ ವಾಪಸಾತಿಗಾಗಿ ಕಾನೂನು ನೆರವು ಸೇರಿದಂತೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುತ್ತದೆ ಎಂದು ಮುರಳೀಧರನ್ ತಿಳಿಸಿದರು.