HEALTH TIPS

ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ‌: ನಿತೀಶ್‌ ಮತ್ತೆ ನಿರಾಕರಣೆ

 

                   ಬಲಿಯಾ: ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟವನ್ನು ತೊರೆದು ಜೆಡಿಯು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸರ್ಕಾರ ರಚಿಸಿದ ನಂತರ, ಪಕ್ಷದ ನಾಯಕ ನಿತೀಶ್ ಕುಮಾರ್ ಅವರು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿಯಾಗತ್ತಾರೆಯೇ ಎಂಬುದು ಮತ್ತೆ ಚರ್ಚೆಗೆ ಬಂದಿದೆ.

ಆದರೆ, ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ನಿತೀಶ್ ಕುಮಾರ್ ಅವರು ಶುಕ್ರವಾರ ಮತ್ತೊಮ್ಮೆ ಹೇಳಿದ್ದಾರೆ.

                  ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟದಲ್ಲಿರುವ ಸುಹೇಲ ದೇವ್ ಭಾರತೀಯ ಸಮಾಜ ಪಾರ್ಟಿಯ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರು ನಿತೀಶ್‌ ಅವರು ಪ್ರಧಾನಿ ಅಭ್ಯರ್ಥಿಯಾಗಲಿ ಎಂದಿದ್ದಾರೆ. ಪತ್ರಕರ್ತರ ಜತೆ ಮಾತನಾಡಿದ ಅವರು, 'ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್ ಅವರು ವಿರೋಧ ಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿಯಾದರೆ, ಅವರಿಗೆ ಬೆಂಬಲ ನೀಡುವ ಕುರಿತು ಪರಿಶೀಲನೆ ನಡೆಸುತ್ತೇವೆ' ಎಂದು ಹೇಳಿದ್ದಾರೆ.

                    ಗುರುವಾರ ತಡರಾತ್ರಿ ಮಾತನಾಡಿದ್ದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, 'ನಿತೀಶ್ ಅವರು ಪ್ರಧಾನಿ ಯಾಕಾಗಬಾರದು. ಮುಖ್ಯಮಂತ್ರಿಯಾಗಿ ಅವರು ಹಲವು ಅವಧಿ ಗಳನ್ನು ಪೂರೈಸಿದ್ದಾರೆ. ಮೋದಿ ಅವರು ಪ್ರಧಾನಿಯಾಗಬಹುದಾದರೆ, ನಿತೀಶ್ ಯಾಕಾಗಬಾರದು' ಎಂದು ಪ್ರಶ್ನಿಸಿದ್ದರು.

                           ಈ ಬಗ್ಗೆ ಪತ್ರಕರ್ತರು ಶುಕ್ರವಾರ ನಿತೀಶ್ ಅವರನ್ನು ಪ್ರಶ್ನಿಸಿದರು. ಆಗ ಅವರು, 'ನಾನು ಪ್ರಧಾನಿ ಹುದ್ದೆಗೆ ಹೋಗಬೇಕು ಎಂದು ಹಲವರು ಬಯಸುತ್ತಾರೆ. ನನ್ನ ಜತೆಗಾರರೂ ನನ್ನ ಬಳಿಯೇ ಈ ಮಾತನ್ನು ಹೇಳಿದ್ದಾರೆ. ಆದರೆ, ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಈ ಹಿಂದೆಯೇ ಹೇಳಿದ್ದೇನೆ. ಈಗಲೂ ಅದೇ ಮಾತು ಹೇಳುತ್ತೇನೆ' ಎಂದರು. 'ಆದರೆ, ದೇಶ ದಾದ್ಯಂತ ವಿರೋಧ ಪಕ್ಷಗಳನ್ನು ಒಗ್ಗೂಡಿ ಸುತ್ತೇನೆ' ಎಂದು ಅವರು ಮತ್ತೆ ಹೇಳಿದ್ದಾರೆ.

                    ಗಿರಿರಾಜ್-ತೇಜಸ್ವಿ ವಾಗ್ವಾದ: 10 ಲಕ್ಷ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದು ತೇಜಸ್ವಿ ಯಾದವ್ ಅವರು ಗುರುವಾರ ನೀಡಿದ್ದ ಹೇಳಿಕೆ ಸಂಬಂಧ, ಅವರು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರ ನಡುವೆ ಟ್ವೀಟ್‌ ವಾಗ್ವಾದ ನಡೆದಿದೆ.

                            ದಿನದ ಬೆಳವಣಿಗೆ

* ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಜಡ್‌ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ

* ತೇಜಸ್ವಿ ಅವರು ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ

* ತೇಜಸ್ವಿ ಅವರು ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಬಿಹಾರ ಸರ್ಕಾರದ ಸಚಿವ ಸಂಪುಟದ ಸದಸ್ಯರಲ್ಲಿ ಮಿತ್ರಪಕ್ಷಗಳಿಗೆ ಖಾತೆ ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ

* ಬಿಹಾರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಹೇಳಿ ಎಂದು ರಾಜ್ಯ ಕಾಂಗ್ರೆಸ್‌ನ ಶಾಸಕರೊಬ್ಬರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

                                 'ವಿಪಕ್ಷಗಳು ಒಟ್ಟಾಗಲಿವೆ'

                'ಬಿಹಾರದಲ್ಲಿ ವಿರೋಧ ಪಕ್ಷಗಳು ಒಟ್ಟಾಗುವ ಮೂಲಕ ಪ್ರಜಾಪ್ರಭುತ್ವದ ಉಳಿವಿನ ಹಾದಿಯನ್ನು ತೋರಿಸಿವೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಟ್ಟಾಗುವ ವಿದ್ಯಮಾನವು ದೇಶದಾದ್ಯಂತ ಪುನರಾವರ್ತನೆಯಾಗಲಿದೆ' ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಾತು ಹೇಳಿದ್ದಾರೆ.

                 ಅದಕ್ಕೂ ಮುನ್ನ ಎಡಪಕ್ಷಗಳ ನಾಯಕರನ್ನೂ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

                   'ದೇಶದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೇರಿದ್ದಾಗಿವೆ. ಬಿಜೆಪಿ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಸಂಚು ಮಾಡಿತ್ತು. ಅದು ಈಗ ಎಲ್ಲಾ ಪಕ್ಷಗಳಿಗೂ ಗೊತ್ತಾಗಿದೆ. ಮೊದಲು ಶಿವಸೇನಾವನ್ನು ಒಡೆಯಲಾಯಿತು. ಅದಕ್ಕೂ ಮೊದಲು ಎಲ್‌ಜೆಪಿಯನ್ನು ಮುಗಿಸಲಾಯಿತು. ಈಗ ಜೆಡಿಯು ಅನ್ನು ಒಡೆಯಲು ಮುಂದಾಗಿತ್ತು. ಆದರೆ ಅದು ವಿಫಲವಾಯಿತು' ಎಂದು ತೇಜಸ್ವಿ ಹೇಳಿದ್ದಾರೆ.

              'ಬಿಜೆಪಿಯು ಹೀಗೆ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಲು ಮುಂದಾಗಿತ್ತು. ಅವು ಇಲ್ಲದಿದ್ದರೆ, ಅದು ಬಿಜೆಪಿಯ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಈ ತಂತ್ರ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೂ ಅರ್ಥವಾಗಿದೆ. ಹಾಗಾಗಿ ಅವೆಲ್ಲವೂ ಒಟ್ಟಾಗಲಿವೆ' ಎಂದು ಅವರು ಹೇಳಿದ್ದಾರೆ.

                                     ಗಿರಿರಾಜ್-ತೇಜಸ್ವಿ ವಾಗ್ವಾದ

              10 ಲಕ್ಷ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದು ತೇಜಸ್ವಿ ಯಾದವ್ ಅವರು ಗುರುವಾರ ನೀಡಿದ್ದ ಹೇಳಿಕೆ ಸಂಬಂಧ, ಅವರು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರ ನಡುವೆ ಟ್ವೀಟ್‌ ವಾಗ್ವಾದ ನಡೆದಿದೆ.

                            ತೇಜಸ್ವಿ ಅವರು ಮಾತನಾಡಿದ್ದ ವಿಡಿಯೊ ತುಣುಕನ್ನು ಗಿರಿರಾಜ್ ಟ್ವೀಟ್ ಮಾಡಿದ್ದರು. ಅದರಲ್ಲಿ, 'ನಾನು ಮುಖ್ಯಮಂತ್ರಿಯಾದರೆ 10 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದೆ. ನಾನು ಈಗ ಉಪಮುಖ್ಯಮಂತ್ರಿ ಅಷ್ಟೆ' ಎಂದು ತೇಜಸ್ವಿ ಹೇಳಿರುವ ದೃಶ್ಯವಷ್ಟೇ ಇತ್ತು.

                           ಗಿರಿರಾಜ್ ಅವರ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, ತಮ್ಮ ಮಾತಿನ ಪೂರ್ಣ ವಿಡಿಯೊವನ್ನು ಟ್ವೀಟ್‌ ಮಾಡಿದರು. 'ನಾನು ಮುಖ್ಯಮಂತ್ರಿಯಾದರೆ 10 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದೆ. ನಾನು ಈಗ ಉಪಮುಖ್ಯಮಂತ್ರಿ ಅಷ್ಟೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿದ್ದೇನೆ. ವಿಶ್ವಾಸಮತ ಸಾಬೀತಿನ ನಂತರ ಅದನ್ನು ಅನುಷ್ಠಾನಕ್ಕೆ ತರುತ್ತೇವೆ' ಎಂದು ಅವರು ಹೇಳಿರುವ ದೃಶ್ಯ ಆ ವಿಡಿಯೊದಲ್ಲಿ ಇತ್ತು. ಅದರ ಜತೆಯಲ್ಲೇ ತೇಜಸ್ವಿ, 'ಒಂದು ಅಡಿ ಉದ್ದದ ಗಡ್ಡ ಬಿಟ್ಟ ತಕ್ಷಣ ಯಾರೂ ಜ್ಞಾನಿಗಳಾಗುವುದಿಲ್ಲ' ಎಂದು ಟ್ವೀಟ್ ಮಾಡಿದ್ದರು.

                       ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗಿರಿರಾಜ್, 'ಬಿಹಾರದ ಜಾತ್ಯತೀತ ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ' ಎಂದು ಟ್ವೀಟ್ ಮಾಡಿದರು. ನಂತರ ತೇಜಸ್ವಿ, 'ಇಂತಹ ಕೀಳು ರಾಜಕಾರಣ ಮಾಡಿದ ಕಾರಣಕ್ಕೇ ಬಿಹಾರದಲ್ಲಿ ಬಿಜೆಪಿಗೆ ಮುಖವಿಲ್ಲ' ಎಂದರು.

                ಆಗ ಗಿರಿರಾಜ್, 'ಮೇವುಗಳ್ಳನ ಮಗ ಸಂತನಾಗುವುದಿಲ್ಲ' ಎಂದು ಟ್ವೀಟ್ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries