ಗುವಾಹಟಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ವಿವಿಧೆಡೆ ಪ್ರತಿಭಟನೆ ಗಳು ಬುಧವಾರ ನಡೆದಿವೆ. ಅಸ್ಸಾಂ ರಾಜಧಾನಿ ಗುವಾಹಟಿಲ್ಲಿ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ (ಎಎಎಸ್‌ಯು) ಪ್ರತಿಭಟನಾ ಸಭೆಯನ್ನು ನಡೆಸಿದೆ ಹಾಗೂ ಈಶಾನ್ಯ ಭಾರತ ವಿದ್ಯಾರ್ಥಿ ಒಕ್ಕೂಟ (ಎನ್‌ಇಎಸ್‌ಓ)ವು ಇಡೀ ಪ್ರಾಂತದಲ್ಲಿ ರ್ಯಾಲಿಗಳನ್ನು ಆಯೋಜಿಸಿದೆ.
ಆದಾಗ್ಯೂ ಗುವಾಹಟಿಯಲ್ಲಿ ಆಸು ಕಾರ್ಯಕರ್ತರ ಪ್ರತಿಭಟನಾ ರ್ಯಾಲಿ ನಡೆಸುವುದಕ್ಕೆ ತಡೆಯೊಡ್ಡಿರುವುದಾಗಿ ತಿಳಿದುಬಂದಿದೆ. 2019ರಲ್ಲಿ ಅಸ್ಸಾಂನಲ್ಲಿ ಮೊದಲ ಬಾರಿಗೆ ಸಿಎಎ ವಿರೋಧಿ ಪ್ರತಿಭಟನಾ ರ್ಯಾಲಿಗಳು ನಡೆದಿದ್ದವು. 2020ರಲ್ಲಿ ಕೋವಿಡ್ ಸೋಂಕಿನ ಹಾವಳಿ ಕಾಣಿಸಿಕೊಳ್ಳುವವರೆಗೂ ಈ ಪ್ರತಿಭಟನೆಗಳು ಮುಂದುವರಿದಿದ್ದವು.
ಮುಂಬರುವ ದಿನಗಳಲ್ಲಿ ಈಶಾನ್ಯ ಭಾರತದಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳನ್ನು ವಿವಿಧ ಸಾಮಾಜಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿರುವುದಾಗಿ ವರದಿಗಳು ತಿಳಿಸಿವೆ.
ಅಕ್ರಮ ವಲಸಿಗರ ಸಮಸ್ಯೆಗೆ ಶಾಶ್ವತ ಪರಿಹಾರ, ಅಸ್ಸಾಂ ಒಪ್ಪಂದದ ಜಾರಿ, ಈಶಾನ್ಯ ಭಾರತಾದ್ಯಂತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದತಿ ಇತ್ಯಾದಿ ಬೇಡಿಕೆಗಳ ಈಡೇರಿಕೆಗೂ ಆಗ್ರಹಿಸಿ ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
1955ರ ಪೌರತ್ವ ತಿದ್ದುಪಡಿ ಕಾಯ್ದೆಯು, ಡಿಸೆಂಬರ್ 31, 2014ರಂದು ಅಥವಾ ಆನಂತರ ಅಫ್ಘಾನಿಸ್ತಾನ, ಬಾಂಗ್ಲಾ ಹಾಗೂ ಪಾಕಿಸ್ತಾನ ದೇಶಗಳಿಂದ ಭಾರತಕ್ಕೆ ಆಕ್ರಮವಾಗಿ ವಲಸೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಪೌರತ್ವವನ್ನು ಪಡೆಯುವುದಕ್ಕೆ ಅವಕಾಶವನ್ನು ನೀಡುತ್ತದೆ.