ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಹೊಸದೊಂದು ಆದೇಶ ಹೊರಡಿಸಿದ್ದು, ಇದು ಆದಾಯ ತೆರಿಗೆ ಪಾವತಿದಾರರೆಲ್ಲ ಗಮನಿಸಲೇಬೇಕಾದ ಸಂಗತಿಯಾಗಿದೆ. ಏಕೆಂದರೆ ಆದಾಯ ತೆರಿಗೆ ಪಾವತಿದಾರರಿಗೆ ಸರ್ಕಾರ ಈ ಒಂದು ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಅದೇನೆಂದರೆ, ಆದಾಯ ತೆರಿಗೆ ಪಾವತಿದಾರರಿಗೆ ಅಟಲ್ ಪೆನ್ಷನ್ ಯೋಜನೆಯ ಪ್ರಯೋಜನ ಪಡೆಯಲಿಕ್ಕೆ ಆಗುವುದಿಲ್ಲ. ಹಣಕಾಸು ಸಚಿವಾಲಯ ಹೊರಡಿಸಿರುವ ಈ ಹೊಸ ಆದೇಶ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಯಾವುದೇ ವ್ಯಕ್ತಿ ಆದಾಯ ತೆರಿಗೆ ಪಾವತಿಸಿದ್ದರೆ ಅಥವಾ ಪಾವತಿಸುತ್ತಿದ್ದರೆ ಅಂಥವರು ಅಟಲ್ ಪಿಂಚಣಿ ಯೋಜನೆಗೆ ಅರ್ಹರಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಯಾರಾದರೂ ಅ. 1ರ ಬಳಿಕ ಅಟಲ್ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯುತ್ತಿರುವಂಥವರು ಆದಾಯ ತೆರಿಗೆ ಪಾವತಿಸಿದ್ದು ಅಥವಾ ಪಾವತಿಸುತ್ತಿರುವುದು ಕಂಡುಬಂದರೆ ಅಂಥವರ ಯೋಜನೆ ರದ್ದುಗೊಳಿಸಿ, ಅದುವರೆಗಿನ ಪಿಂಚಣಿ ಮೊತ್ತವನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಟಲ್ ಪಿಂಚಣಿ ಯೋಜನೆಯನ್ನು 18ರಿಂದ 40 ವರ್ಷದೊಳಗಿನವರು ಪಡೆಯಬಹುದಾಗಿದ್ದು, ಅವರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಇದ್ದರೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಫಲಾನುಭವಿಗಳಿಗೆ 60 ವರ್ಷದ ಬಳಿಕ ಮಾಸಿಕ ಕನಿಷ್ಠ 1ರಿಂದ 5 ಸಾವಿರ ರೂ. ವರೆಗೆ ಪಿಂಚಣಿ ಲಭಿಸುತ್ತದೆ. ಸದ್ಯ ದೇಶದಲ್ಲಿ ಜೂ. 4ರವರೆಗಿನ ಮಾಹಿತಿ ಪ್ರಕಾರ 3.739 ಕೋಟಿ ಮಂದಿ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.