ನಾಗಪುರ: 'ಸಾಕಷ್ಟು ಹೋರಾಟಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ದೇಶ ಸ್ವಾವಲಂಬಿಯಾಗಬೇಕು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದರು.
ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯಂದು ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಧ್ಜಜಾರೋಹಣ ನೆರವೇರಿಸಿ ಮಾತನಾಡಿದ ಅವರು, 'ದೇಶವು ಜಗತ್ತಿಗೆ ಶಾಂತಿಯ ಸಂದೇಶ ನೀಡುತ್ತದೆ' ಎಂದು ಹೇಳಿದರು.
'ಇದು ಹೆಮ್ಮೆ ಪಡುವ ದಿನ. ಸಂಕಲ್ಪ ಹೊಂದುವ ದಿನ. ಸಾಕಷ್ಟು ಹೋರಾಟಗಳ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ಸ್ವಾವಲಂಬಿಯಾಗಬೇಕು' ಎಂದರು.
'ದೇಶ ಮತ್ತು ಸಮಾಜ ನಮಗೆ ಏನು ನೀಡಿತು ಎಂದು ಜನ ಕೇಳಬಾರದು. ಬದಲಿಗೆ ದೇಶಕ್ಕೆ ನಾವೇನು ನೀಡುತ್ತಿದ್ದೇವೆ' ಎಂದು ಯೋಚಿಸಬೇಕು ಎಂದು ಭಾಗವತ್ ಹೇಳಿದರು.
ಬಿಗಿ ಭದ್ರತೆಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಕೆಲವು ಸ್ವಯಂಸೇವಕರು ಮತ್ತು ಪ್ರಚಾರಕರು ಉಪಸ್ಥಿತರಿದ್ದರು.
ರೇಶಿಂಬಾಗ್ ಪ್ರದೇಶದ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿಯಲ್ಲಿಯೂ ಆರ್‌ಎಸ್‌ಎಸ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರಲ್ಲಿ ನಾಗ್ಪುರ ಮಹಾನಗರದ ಸಹಸಂಘಚಾಲಕ್ ಶ್ರೀಧರ್ ಗಾಡ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.