ನವದೆಹಲಿ: ಅಬಕಾರಿ ನೀತಿ ವಿಚಾರವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರದ ವಿರುದ್ಧ ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕಿಡಿಕಾರಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಅಧಿಕಾರದ ಅಮಲೇರಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಕಿಸಿದ್ದು, ಅಬಕಾರಿ ನೀತಿ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್‌ಗೆ ಪತ್ರ ಬರೆದಿರುವ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಅವರೇ ಬರೆದಿದ್ದ 'ಸ್ವರಾಜ್' ಪುಸ್ತಕದ ಸಾಲುಗಳನ್ನು ಪತ್ರದಲ್ಲಿ ಹಜಾರೆ ಉಲ್ಲೇಖಿಸಿದ್ದು, 'ರಾಜಕೀಯ ಪ್ರವೇಶಿಸುವ ಮುನ್ನ ನೀವು ಸ್ವರಾಜ್ ಎಂಬ ಪುಸ್ತಕ ಬರೆದಿದ್ದಿರಿ. ಅದಕ್ಕೆ ನಾನು ಮುನ್ನುಡಿ ಬರೆದಿದ್ದೆ. ಆ ಪುಸ್ತಕದಲ್ಲಿ ಗ್ರಾಮ ಸಭೆ ಮತ್ತು ಮದ್ಯ ನೀತಿಯ ಬಗ್ಗೆ ಕೊಚ್ಚಿಕೊಂಡಿದ್ದಿರಿ. ನೀವು ಏನು ಬರೆದಿದ್ದಿರೋ ಅದನ್ನು ನಿಮಗೆ ನೆನಪಿಸುತ್ತಿದ್ದೇನೆ' ಎಂದು ಪುಸ್ತಕದ ಕೆಲವು ಸಾಲುಗಳ ಜತೆ ಹಜಾರೆ ಪತ್ರ ಬರೆದಿದ್ದಾರೆ.
ಗ್ರಾಮಗಳಲ್ಲಿರುವ ಮದ್ಯದ ಚಟದ ಸಮಸ್ಯೆ ಮತ್ತು ಅದಕ್ಕಿರುವ ಪರಿಹಾರಗಳ ಕುರಿತು ಪುಸ್ತಕದಲ್ಲಿರುವ ಸಾಲುಗಳನ್ನೇ ಹಜಾರೆ ಉಲ್ಲೇಖಿಸಿದ್ದು, 'ಪುಸ್ತಕವನ್ನು ಆದರ್ಶಪ್ರಾಯವಾಗಿ ಬರೆದಿದ್ದ ನಿಮ್ಮಿಂದ ನನಗೆ ಅಪಾರ ನಿರೀಕ್ಷೆಗಳಿದ್ದವು. ಆದರೆ ರಾಜಕೀಯಕ್ಕೆ ಪ್ರವೇಶಿಸಿದ ಹಾಗೂ ಮುಖ್ಯಮಂತ್ರಿ ಆದ ಬಳಿಕ ಆ ಸಾಲುಗಳನ್ನೆಲ್ಲ ನೀವು ಮರೆತಂತೆ ಕಾಣುತ್ತಿದೆ. ನೀವು ರೂಪಿಸಿರುವ ಹೊಸ ಅಬಕಾರಿ ನೀತಿ ಮದ್ಯದ ಚಟವನ್ನು ಉತ್ತೇಜಿಸುವಂತಿದೆ. ಈ ನೀತಿಯು ರಾಜ್ಯದ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಕಾರಣವಾಗಬಹುದು. ಪರಿಣಾಮವಾಗಿ, ಸಾರ್ವಜನಿಕರಿಗೆ ವಿರುದ್ಧವಾದ ಭ್ರಷ್ಟಾಚಾರವನ್ನು ಉತ್ತೇಜಿಸಬಹುದು, ಆದರೆ, ನೀವು ಅಂತಹ ನೀತಿಯನ್ನು ತರಲು ನಿರ್ಧರಿಸಿದ್ದೀರಿ' ಎಂದು ಹಜಾರೆ ಟೀಕಿಸಿದ್ದಾರೆ.
'ಮದ್ಯದಲ್ಲಿ ಅಮಲು ಇರುವಂತೆಯೇ ಅಧಿಕಾರದಲ್ಲಿಯೂ ಇದೆ. ನಿಮಗೆ ಅಧಿಕಾರದ ಅಮಲು ಇದೆ ಎಂದು ಅಣ್ಣಾ ಹಜಾರೆ ಟೀಕಿಸಿದ್ದಾರೆ.
ಇನ್ನು 'ಸ್ವರಾಜ್' ಪುಸ್ತಕವನ್ನು ಕೇಜ್ರಿವಾಲ್ 2012ರಲ್ಲಿ ಬರೆದಿದ್ದರು. ದೆಹಲಿ ಅಬಕಾರಿ ನೀತಿ ಅಕ್ರಮದ ಆರೋಪಕ್ಕೆ ಸಂಬಂಧಿಸಿ 15 ಮಂದಿ ಹಾಗೂ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವವರಲ್ಲಿ ಒಬ್ಬರಾಗಿದ್ದಾರೆ.