ಈಗ ಏನಿದ್ದರು ಕಂಪ್ಯೂಟರ್ ಯುಗ ಹಲವು ಕೆಲಸಗಳಿಗೆ ಕಂಪ್ಯೂಟರ್ ಬಳಕೆ ಮಾಡಲಾಗುತ್ತಿದೆ. ಅನೇಕರು ದಿನ ನಿತ್ಯ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದುಂಟು. ಕೆಲವರಿಗೆ ಹೇಗೆ ಅಂದರೆ ಅತ್ತ ಇತ್ತ ಎದ್ದು ಹೋಗದೆ ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತಾರೆ. ಇದರಿಂದ ಕಣ್ಣು ನೋವು, ತಲೆನೋವು, ಬೆನ್ನು ನೋವು, ಕೈ, ಭುಜ ನೋವು ಸಾಮಾನ್ಯವಾಗಿ ಉಂಟಾಗುತ್ತಿದೆ. ಇನ್ನು ಅನೇಕರಿಗೆ ನಿರಂತರ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸದಿಂದ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಇದಲ್ಲದೆ, ಆರೋಗ್ಯ ಸಮಸ್ಯೆಯು ಅಂಟಿಕೊಳ್ಳುತ್ತಿದೆ.
ಹೀಗಾಗಿ ಕಂಪ್ಯೂಟರ್ ಮುಂದೆ ಕುಳಿತು ನಿರಂತರವಾಗಿ ಕೆಲಸ ಮಾಡುವವರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಾಗಾದರೆ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು ಆರೋಗ್ಯವಾಗಿರಲು ಏನು ಮಾಡಬೇಕು? ಯಾವ ರೀತಿಯ ಕೆಲಸವನ್ನು ನೀವು ಮಾಡಿದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಕೆಲಸದ ಸ್ಟೈಲ್ ಚೇಂಜ್ ಮಾಡಿ!
ಮನುಷ್ಯ ಜಾಸ್ತಿ ಅಂದರೆ ಎರಡರಿಂದ ಮೂರು ಗಂಟೆ ನಿರಂತರವಾಗಿ ಕೂತು ಕೆಲಸ ಮಾಡಬಹುದು. ಅದಕ್ಕಿಂತ ಜಾಸ್ತಿ ಕೂತು ಕೆಲಸ ಮಾಡಿದರೆ ಆತನ ಬೆನ್ನು ಬಳಲಿ ಬೆಂಡಾಗಿ ಹೋಗುವುದು ಪಕ್ಕಾ. ಹೌದು, ಜಾಸ್ತಿ ಕೂತರೆ ಬೆನ್ನು ನೋವಿನಂತಹ ಸಮಸ್ಯೆ ಉಂಟಾಗುತ್ತದೆ. ಆದರೆ ಮನುಷ್ಯ ಎಷ್ಟು ಹೊತ್ತು ಬೇಕಾದರು ನಿಲ್ಲುವ ಶಕ್ತಿಯನ್ನು ಹೊಂದಿದ್ದಾನೆ. ಹೀಗಾಗಿ ನಿಮ್ಮ ಬೆನ್ನು ಸರಿ ಇರಬೇಕು ಎಂದಾದ್ರೆ, ಜಾಸ್ತಿ ಸ್ಟ್ರೈನ್ ಆಗದ ಹಾಗೇ ಇರಬೇಕು ಎಂದಾದರೆ ನೀವು ನಿಮ್ಮ ಕೆಲಸದ ಸ್ಟೈಲ್ ಚೇಂಜ್ ಮಾಡಬೇಕು. ಹೌದು, ನಿಂತು ಕೆಲಸ ಮಾಡುವ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಈಗ ಮಾರುಕಟ್ಟೆಯಲ್ಲಿ ಸ್ಟ್ಯಾಂಡಿಂಗ್ ಡೆಸ್ಕ್ ಸಿಗುತ್ತದೆ. ಕೆಲಸಕ್ಕೆ ಇದನ್ನು ಬಳಕೆ ಮಾಡಿಕೊಳ್ಳಬಹುದು. ಇದರ ಬಳಕೆಯಿಂದ ನಿಂತು ಕೆಲಸ ಮಾಡಬಹುದು. ಒಂದು ವೇಳೆ ನಿಂತು ನಿಮಗೆ ಸುಸ್ತಾದರೆ ಕೂರ ಬಹುದು. ಹೀಗೆ ಚೇಂಜ್ ಮಾಡುತ್ತಿರಬಹುದಾಗಿದೆ.
ಅತ್ತ ಇತ್ತ ಹೋಗಿ!
ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಚಲನೆ ಮತ್ತು ಚಟುವಟಿಕೆಯ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಇದರಿಂದ ಹೊರಬರಲು ನೀವು ಕೆಲವೊಂದು ಸಮಯ ಎದ್ದು ಅತ್ತ ಇತ್ತ ಹೋಗುವುದು ಅಥವಾ ಅತ್ತ ಇತ್ತ ತಿರುಗಾಡುವ ಕೆಲಸವನ್ನು ಮಾಡುವುದು ಒಳ್ಳೆಯದು. ಕೆಲಸದಲ್ಲಿ ನೀವು ತಲ್ಲಿನರಾಗುವುದರಿಂದ ಅತ್ತ ಇತ್ತ ಹೋಗುವುದನ್ನೇ ನೀವು ಮರೆಯುತ್ತೀರಿ ಅದಕ್ಕಾಗಿ ನೀವು ಪ್ರತೀ ಗಂಟೆಗೆ ಅಲಾರಂ ಇಟ್ಟು ಅಲಾರಂ ಆದಾಗ ಎದ್ದು ಅತ್ತ ಇತ್ತ ನಡೆಯಲು ಹೋಗಬೇಕು. ಅಥವಾ ಸರಳವಾದ ಮನೆಕೆಲಸವನ್ನು ಮಾಡಬಹುದು. ಯಾವುದು ಆಗಿಲ್ಲದಿದ್ದರೆ ಸುಮ್ಮನೆ ಮನೆ ಹೊರಗೆ ಬಂದು ನಿಂತರೂ ಪರವಾಗಿಲ್ಲ ಕೆಲಸದ ಸ್ಥಳದಿಂದ ಅಥವಾ ನಿಮ್ಮ ಡೆಸ್ಕ್ ನಿಂದ ನೀವು ಎದ್ದು ಹೋಗಬೇಕು. ಈ ಸಣ್ಣ ಪ್ರಮಾಣದ ಚಟುವಟಿಕೆಯು ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಮೇಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಅತ್ತ ಇತ್ತ ಓಡಾಡುವುದರಿಂದ ಕ್ಯಾಲೊರಿಗಳು ಬರ್ನ್ ಆಗುತ್ತದೆ. ಇನ್ನು ಈ ರೀತಿ ಡೆಸ್ಕ್ ನಿಂದ ಎದ್ದು ಹೊರಗೆ ಬಂದಾಗ ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಎಲಿವೇಟರ್ ಬದಲಿಗೆ ಮೆಟ್ಟಿಲುಗಳಲ್ಲಿ ನಡೆಯಿರಿ ಇದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಕಣ್ಣಿಗೆ ರೆಸ್ಟ್ ನೀಡಿ!
ನೀವು ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಿದ್ದರೆ ಕಣ್ಣು ಸುಸ್ತಾದ ಅನುಭವ ಆಗುತ್ತದೆ. ಕಣ್ಣಿನಿಂದ ನೀರು ಬರುವುದುಂಟು. ಇನ್ನು ಕೆಲವರಿಗೆ ತಲೆನೋವು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಕಾಡುತ್ತದೆ. ಹೀಗಾಗಿ ನೀವು ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಕಣ್ಣಿಗೆ ರೆಸ್ಟ್ ಕೊಡುವ ಕೆಲಸವನ್ನು ಮಾಡಲೇಬೇಕು. ಈ ಮೂಲಕ ನಿಮ್ಮ ಕಣ್ಣು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೌದು, ಇಡೀ ದಿನ ಕಂಪ್ಯೂಟರ್ ಪರದೆಯ ಮೇಲೆ ಕುಳಿತುಕೊಂಡು ನೋಡುವುದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಒತ್ತಡವನ್ನು ನೀಡುತ್ತದೆ. ಇದಕ್ಕಾಗಿ ನೀವು ಸರಳ ಕ್ರಮಗಳನ್ನು ಕೈಗೊಳ್ಳಬಹುದು. ನಿಮ್ಮ ಡೆಸ್ಕ್ ನಿಂದ ಎದ್ದು ಒಂದು ಕಡೆ ಕೂತು ಒಂದು ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತುಕೊಂಡರೆ ಕಣ್ಣಿಗೆ ಸಾಕಷ್ಟು ರೆಸ್ಟ್ ಸಿಕ್ಕಿದಂತೆ ಆಗುತ್ತದೆ. ಅಥವಾ ಕಣ್ಣು ಹಾಗೂ ಮುಖವನ್ನು ತಂಪು ನೀರಿನಿಂದ ತೊಳೆದರೆ ಅದು ಕೂಡ ನಿಮ್ಮ ಕಣ್ಣಿಗೆ ತಂಪು ಅನುಭವ ನೀಡುವ ಮೂಲಕ ಸುಸ್ತು ಕಡಿಮೆ ಮಾಡುತ್ತದೆ. ಮುಖ್ಯವಾಗಿ ನಿಮ್ಮ ಡೆಸ್ಕ್ ನಿಂದ ಎದ್ದು ಬೇರೆಯಾವುದಾದರೂ ವಸ್ತುವನ್ನು ನೋಡಬೇಕು. ಮುಖ್ಯವಾಗಿ ಹಚ್ಚ ಹಸಿರಿನ ಪರಿಸರ ನೋಡಿದರೆ ಇನ್ನು ಉತ್ತಮ.
ಆರೋಗ್ಯಭರಿತ ಲಘು ಆಹಾರ ಸೇವಿಸಿ!
ನೀವು ಲ್ಯಾಪ್ ಟಾಪ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ದೇಹಕ್ಕೆ ಚಟುವಟಿಕೆ ಇರುವುದಿಲ್ಲ. ಹೀಗಾಗಿ ಕುಳಿತು ಕೆಲಸ ಮಾಡುವುದರಿಂದ ಬೊಜ್ಜು ಜಾಸ್ತಿಯಾಗುವುದು, ಶುಗರ್ ಇನ್ನಿತರ ಸಮಸ್ಯೆಗಳು ಬರುವುದು ಜಾಸ್ತಿ. ಇನ್ನು ಅನೇಕರಿಗೆ ಒಂದು ಅಭ್ಯಾಸವಿದೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಜಂಕ್ ಫುಡ್ ಸೇವಿಸುವುದು. ಇದು ತಿನ್ನಲು ಮಜಾ ನೀಡುತ್ತೆ ಆದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಹೌದು, ಮೊದಲೇ ನೀವು ಕುಳಿತು ಕೆಲಸ ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಸಿಗದೆ ನಿಮ್ಮ ದೇಹದಲ್ಲಿ ಬೊಜ್ಜು ಸೇರಿಕೊಂಡಿರುತ್ತದೆ. ಮತ್ತೆ ನೀವು ಜಂಕ್ ಫುಡ್ ತಿಂದರೆ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಹೀಗಾಗಿ ನೀವು ಆರೋಗ್ಯಕರ ಆಹಾರ ಸೇವಿಸಬೇಕು. ಅಂದರೆ ಸೇಬು ಹಣ್ಣು, ಕಡಲೆ, ಜಾಸ್ತಿ ಪ್ರೊಟೀನ್ ಇರುವ ಆಹಾರ ಸೇವಿಸಬೇಕು. ಇದರಿಂದ ಹೊಟ್ಟೆಯು ತುಂಬಿದ ಅನುಭವ ಆಗುತ್ತೆ ದೇಹಕ್ಕೂ ಬೊಜ್ಜಿನಂತಹ ಸಮಸ್ಯೆ ಕಾಡುವುದಿಲ್ಲ.
ನೀವು ಕೆಲಸ ಮಾಡುವ ಡೆಸ್ಕ್ ಸ್ವಚ್ಛವಾಗಿಟ್ಟುಕೊಳ್ಳಿ!
ನೀವು ಗಮನಿಸಿರಬಹುದು ಕೆಲಸ ಮಾಡುವ ಡೆಸ್ಕ್ ನಲ್ಲಿ ಕಸ, ಧೂಳು ತುಂಬಿರುತ್ತದೆ. ಅದನ್ನು ಕ್ಲೀನ್ ಮಾಡುವ ಗೋಜಿಗೆ ಕೆಲವರು ಹೋಗುವುದಿಲ್ಲ. ಇದರಿಂದ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಶೀತ, ಕೆಮ್ಮು, ಧೂಳಿನ ಸಮಸ್ಯೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹೀಗಾಗಿ ನೀವು ನಿತ್ಯವು ನಿಮ್ಮ ಡೆಸ್ಕ್ ಅನ್ನು ಸ್ವಚ್ಛವಾಗಿ ಇಡಬೇಕು. ಕಂಪ್ಯೂಟರ್ ಉಜ್ಜಿಕೊಳ್ಳುವುದು, ಕಂಪ್ಯೂಟರ್ ಸುತ್ತಮುತ್ತ ನಿತ್ಯವೂ ಕ್ಲೀನ್ ಮಾಡುವುದು. ಹೀಗೆ ಮಾಡಿದರೆ ಆರೋಗ್ಯವು ಚೆನ್ನಾಗಿ ಇರುತ್ತದೆ.