ಚೆನ್ನೈ: ಹಿಂದೊಮ್ಮೆ ರಾಜಕೀಯ ಪಕ್ಷ ಕಟ್ಟಿ, ನಂತರ ರಾಜಕೀಯವೇ ಬೇಡ ಎಂದು ಪಕ್ಷವನ್ನು ವಿಸರ್ಜಿಸಿ ಭಾರಿ ಸುದ್ದಿಯಾಗಿದ್ದ ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಅವರೀಗ ರಾಜ್ಯಪಾಲರ ಹುದ್ದೆಯನ್ನು ಏರಲಿದ್ದಾರೆಯೆ? ಹೀಗೊಂದು ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
2017 ಡಿಸೆಂಬರ್ 31ರಂದು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದ ರಜನೀಕಾಂತ್ ಅವರು, 2017-2021 ರವರೆಗೆ ರಜಿನಿ ಮಕ್ಕಳ್ ಮಂದ್ರಂ ಎಂಬ ಪಕ್ಷ ಸ್ಥಾಪಿಸಿದ್ದರು. ನನಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು ಎಂಬ ಯಾವ ಆಸೆಯೂ ಇಲ್ಲ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು ರಾಜಕೀಯಕ್ಕೆ ಬಂದು ಪಕ್ಷ ಕಟ್ಟುತ್ತಿಲ್ಲ. ನನ್ನ ಪಕ್ಷದಲ್ಲಿ ನನ್ನೊಂದಿಗೆ ಕೆಲವೇ ನಾಯಕರು ಕೆಲಸ ಮಾಡಲಿದ್ದಾರೆ. ಒಂದು ಸಮರ್ಥ ಪಕ್ಷದ ನಾಯಕ ಕೂಡ ರಾಜ್ಯವನ್ನು ಆಳಬಲ್ಲ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರುವುದಷ್ಟೇ ನನ್ನ ಉದ್ದೇಶ ಎಂದು ರಜನೀಕಾಂತ್ ಅವರು ತಿಳಿಸಿದ್ದರು.
ಆದರೆ 2021ರ ಜುಲೈ 12 ರಂದು ಅವರು ಪಕ್ಷವನ್ನು ವಿಸರ್ಜಿಸಿದರು. ಪಕ್ಷವನ್ನು ವಿಸರ್ಜಿಸುವ ಸಮಯದಲ್ಲಿ ತಾವು ರಾಜಕೀಯಕ್ಕೆ ಮರಳುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ ಅವರು ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಪಾಲರೊಂದಿಗೆ ರಾಜಕೀಯದ ಕುರಿತು ಚರ್ಚಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ರಾಜ್ಯಪಾಲರೊಂದಿಗಿನ ಭೇಟಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು.
2004ರಲ್ಲಿ ರಜನೀಕಾಂತ್, ವೈಯಕ್ತಿಕವಾಗಿ ಬಿಜೆಪಿಗೆ ಮತ ಹಾಕುವುದಾಗಿ ಘೋಷಿಸಿದ್ದರು. ಆದರೆ ಲೋಕಸಭೆಯ ಚುನಾವಣೆಯ ಸಮಯದಲ್ಲಿ ಯಾವುದೇ ಒಕ್ಕೂಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿರಲಿಲ್ಲ. ಇವೆಲ್ಲ ಬೆಳವಣಿಗೆಗಳ ನಡುವೆಯೇ ಇದೀಗ ಹೊಸ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅದೇನೆಂದರೆ, ರಜನೀಕಾಂತ್ ಅವರನ್ನು ರಾಜ್ಯಪಾಲರನ್ನಾಗಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಸಂಗೀತ ಮಾಂತ್ರಿಕ ಇಳಯರಾಜಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವ ಬಿಜೆಪಿ, ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದು, ಇದೀಗ ರಜನಿ ಅವರನ್ನು ರಾಜ್ಯಪಾಲರನ್ನಾಗಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡಲು ಎಂಬಂತೆ, ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಕೆಂಪುಕೋಟೆಯಲ್ಲಿ ಪಾಲ್ಗೊಂಡಿದ್ದ ರಜನೀಕಾಂತ್ ಅವರು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯಲ್ಲಿ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದರು. ಆದರೆ, ನೇರವಾಗಿ ರಾಜಕೀಯಕ್ಕೆ ರಜನಿಕಾಂತ್ ಬರಲು ಒಪ್ಪದ ಕಾರಣ ಅವರನ್ನು ರಾಜ್ಯಪಾಲರನ್ನಾಗಿಸಲು ಬಿಜೆಪಿ ಯೋಜನೆ ರೂಪಿಸಿದೆ ಎನ್ನಲಾಗುತ್ತಿದ್ದು, ಇದಕ್ಕೆ ರಜನೀಕಾಂತ್ ಅವರೂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಸುದ್ದಿ ಇದೆ. ಇದಕ್ಕೆ ಶೀಘ್ರವೇ ಉತ್ತರ ಸಿಗುವ ನಿರೀಕ್ಷೆ ಇದೆ.