ಜೈಸಲ್ಮೇರ್: ನಿರಾಶ್ರಿತರಿಗೆ ಭಾರತೀಯ ಪೌರತ್ವ(Indian citizenship) ನೀಡುವ ಕುರಿತಂತೆ ಕಠಿಣ ನಿಯಮಗಳನ್ನು ಸರಕಾರ ಜಾರಿಗೆ ತಂದಿರುವುದರಿಂದ ದೊಡ್ಡ ಸಂಖ್ಯೆಯ ಪಾಕಿಸ್ತಾನಿ ಹಿಂದು ನಿರಾಶ್ರಿತರು(refugees) ಪೌರತ್ವ ದೊರೆಯದೆ ಮರಳಿ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ ಎಂದು timesofindia ವರದಿ ಮಾಡಿದೆ.
ಅವರು ಅಲ್ಲಿ ದೌರ್ಜನ್ಯವೆದುರಿಸಿ ಭಾರತಕ್ಕೆ ಬಂದಿದ್ದರು. ಈ ವರ್ಷದ ಜನವರಿಯಿಂದ ಜುಲೈ ತನಕ 334 ಪಾಕಿಸ್ತಾನಿ ಹಿಂದು ನಿರಾಶ್ರಿತರು ಭಾರತೀಯ ಪೌರತ್ವ ದೊರೆಯದೆ ತಮ್ಮ ದೇಶಕ್ಕೆ ವಾಪಸಾಗಿದ್ದಾರೆ ಎಂದು ವರದಿಯಾಗಿದೆ.
"2021ರಿಂದ ಇಲ್ಲಿಯ ತನಕ ಸುಮಾರು 1500 ಪಾಕಿಸ್ತಾನಿ ಹಿಂದುಗಳು ಪಾಕಿಸ್ತಾನಕ್ಕೆ ವಾಪಸಾಗಿದ್ದಾರೆ. ಭಾರತೀಯ ಪೌರತ್ವ ಪಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ನಡೆಸಲು ಇವರಲ್ಲಿ ಹೆಚ್ಚಿನವರಿಗೆ ಹಣ ಹಾಗೂ ಸಂಪನ್ಮೂಲಗಳಿಲ್ಲ. ಇದೇ ಕಾರಣಕ್ಕೆ ಅವರು ವಾಪಸಾಗುತ್ತಿದ್ದಾರೆ,'' ಎಂದು ಸಿಮಂತ್ ಲೋಕ್ ಸಂಘಟನ್ ಅಧ್ಯಕ್ಷ ಹಿಂದು ಸಿಂಗ್ ಸೋಧ ಹೇಳುತ್ತಾರೆ.
ಭಾರತೀಯ ಪೌರತ್ವಕ್ಕಾಗಿ ಕಾದಿರುವ ಸುಮಾರು 25,000 ಪಾಕ್ ಹಿಂದುಗಳಿದ್ದಾರೆ ಹಾಗೂ ಅವರು ಇಲ್ಲಿ ಕಳೆದ 10-15 ವರ್ಷಗಳಿಂದ ನೆಲೆಸಿದ್ದಾರೆ ಎಂದು ಅವರು ಹೇಳಿದರು.
2004 ಹಾಗೂ 2005 ರಲ್ಲಿ ನಡೆದ ಶಿಬಿರಗಳಲ್ಲಿ 13000 ಪಾಕ್ ಹಿಂದುಗಳಿಗೆ ಭಾರತೀಯ ಪೌರತ್ವ ದೊರಕಿದ್ದರೆ ಕಳೆದ ಐದು ವರ್ಷಗಳಲ್ಲಿ ಕೇವಲ 2000 ಮಂದಿಗೆ ಪೌರತ್ವ ದೊರಕಿದೆ ಎಂದು ವರದಿಯಾಗಿದೆ.
ಸರಕಾರದ ನಿಯಮಗಳ ಪ್ರಕಾರ ಪಾಕಿಸ್ತಾನಿ ಹಿಂದುಗಳು ಭಾರತದ ಪೌರತ್ವ ಪಡೆಯಬೇಕಾದರೆ ಪಾಕಿಸ್ತಾನಿ ದೂತಾವಾಸದಿಂದ ತಮ್ಮ ಪಾಸ್‍ಪೋರ್ಟ್ ನವೀಕರಿಸಬೇಕಿದೆ ಮತ್ತು ಪಾಸ್‍ಪೋರ್ಟ್ ಹಸ್ತಾಂತರಿಸುವ ಕುರಿಂತೆ ಅಲ್ಲಿನ ದೂತಾವಾಸದಿಂದ ಪ್ರಮಾಣಪತ್ರ ಕೂಡ ಪಡೆಯಬೇಕಿದೆ.
ಪಾಕ್ ದೂತಾವಾಸದಲ್ಲಿ ಪಾಸ್‍ಪೋರ್ಟ್ ನವೀಕರಣ ಶುಲ್ಕ ರೂ. 8000 ದಿಂದ ರೂ. 10,000 ದಷ್ಟಿದ್ದು ಬಡ ನಿರಾಶ್ರಿತರಿಗೆ ಇಷ್ಟೊಂದು ಹಣ ಪಾವತಿಸಲು ಸಾಧ್ಯವಿಲ್ಲದೇ ಇರುವುದರಿಂದ ಹಲವರು ವಾಪಸಾಗುತ್ತಿದ್ದು ನಿಯಮಗಳನ್ನು ಸರಳೀಕರಿಸಬೇಕೆಂದು ಸೋಧ ಆಗ್ರಹಿಸಿದ್ದಾರೆ.