ಪೆರ್ಲ: ಮಾನವನ ಬದುಕಿನಲ್ಲಿ ಪ್ರಕೃತಿಯ ಪಾತ್ರ ಮಹತ್ವದ್ದು. ಆದರೆ ನಾವು ನಮ್ಮ ಸ್ವಾರ್ಥಕ್ಕಾಗಿ ನಿಸರ್ಗವನ್ನು ಹಾಳುಗೆಡಹುತ್ತಿದ್ದೇವೆ. ಮನುಷ್ಯರಾದ ನಾವೆಲ್ಲರೂ ಪ್ರಕೃತಿಯ ಮೌಲ್ಯವನ್ನು ಅರಿತುಕೊಳ್ಳಬೇಕಾಗಿದೆ ಎಂದು ಶೇಣಿಯ ಶ್ರೀ ಶಾರದಾಂಬಾ ಹಿರಿಯ ಅನುದಾನಿತ ಶಾಲೆಯ ಶಿಕ್ಷಕರೂ ಉತ್ತಮ ಕೃಷಿಕ ಪ್ರಶಸ್ತಿ ವಿಜೇತರೂ ಆದ ಶ್ರೀಧರ ಮಾಸ್ತರ್ ಹೇಳಿದರು.
ಪ್ರಕೃತಿ ಸಂರಕ್ಷಣ ದಿನದ ಅಂಗವಾಗಿ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಎನ್ನೆಸ್ಸೆಸ್ ಘಟಕವು ಆಯೋಜಿಸಿದ 'ಹೊಸ ಚಿಗುರು ಬೆಳೆಯಲಿ' ಎಂಬ ಅಭಿಯಾನವನ್ನು ಬೀಜ ಬಿತ್ತುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಮಿತಿಮೀರಿದ ಭೋಗಾಸಕ್ತಿ, ನಿಸರ್ಗದ ಮೇಲಿನ ನಿರಂತರ ದೌರ್ಜನ್ಯವು ಜಗತ್ತಿನ ನಾಶಕ್ಕೆ ಕಾರಣವಾಗುತ್ತದೆ. ಮನುಷ್ಯ ಎμÉ್ಟೀ ಬಲಿಷ್ಠನಾಗಿ ಬೆಳೆದರೂ ನಿಸರ್ಗದ ಎದುರು ನಿಲ್ಲಲಾರ. ಆಧುನಿಕತೆಯ ಹೆಸರಿನಲ್ಲಿ ಆತನು ಪ್ರಕೃತಿಯನ್ನು ನಾಶ ಮಾಡಿದಷ್ಟೂ ಮುಂದಿನ ದಿನಗಳಲ್ಲಿ ಪ್ರಕೃತಿಯು ವಿಧಿಸುವ ಶಿಕ್ಷೆಯನ್ನು ಅನುಭವಿಸಿಯೇ ತೀರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಸಿದ್ಧ ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಪ್ರಕೃತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಎನ್ನೆಸ್ಸೆಸ್ ಸ್ವಯಂ ಸೇವಕರು ಮಾನವ ಸಂಪನ್ಮೂಲವೂ ಸೇರಿದಂತೆ ಪ್ರಾಣಿ ಮತ್ತು ಸಸ್ಯ ವೈವಿಧ್ಯಗಳ ಅಭಿವೃದ್ಧಿಯ ಕಡೆಗೆ ಹೊಸ ಹಾದಿಯನ್ನು ತೋರಿದ್ದಾರೆ. ಪ್ರಾಕೃತಿಕ ಸಂಪನ್ಮೂಲಗಳ ದುರ್ಬಳಕೆಯನ್ನು ತಡೆಗಟ್ಟುವ ವಿಧಾನಗಳನ್ನು ಅರಿತುಕೊಂಡಿದ್ದಾರೆ ಎಂದು ನುಡಿದರು.
ಎನ್ನೆಸ್ಸೆಸ್ ಸ್ವಯಂ ಸೇವಕರು ಸುಧೀರ್ ಕುಮಾರ್ ಶೆಟ್ಟಿ ಅವರ ಹೊಲದಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಬೀಜಗಳನ್ನು ಬಿತ್ತಿದರು. ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ವಿಜಯಲಕ್ಷ್ಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದೀನ್ ಕುಟ್ಟಿ, ಅಧ್ಯಾಪಕರಾದ ಶಾಸ್ತ ಕುಮಾರ್, ಅನೀಶ್ ಕುಮಾರ್, ದಿಲೀಪ್ ಮಾಧವ, ಪ್ರಸನ್ನ ಕುಮಾರಿ, ಶಿಕ್ಷಕೇತರ ಸಿಬ್ಬಂದಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸಂತೋμï ಕ್ರಾಸ್ತ ಸ್ವಾಗತಿಸಿ ವಿದ್ಯಾರ್ಥಿ ಆಯಿಷತ್ ಸಬ್ನ ವಂದಿಸಿದರು.