HEALTH TIPS

ಕ-ನಾದ: ಭಾರತೀಯ ಭಾಷೆಗಳ ಏಕರೂಪದ ಕೀಲಿಮಣೆ ಸಿದ್ಧ

            ಮಂಗಳೂರು: ಕರಾವಳಿಯ ಎಂಜಿನಿಯರ್‌ಗಳ ತಂಡದ ಪ್ರಯತ್ನ ಫಲ ಕಂಡಿದೆ. ಕನ್ನಡ ಮತ್ತು ತುಳು ಸೇರಿದಂತೆ ಭಾರತೀಯ ಭಾಷೆಗಳನ್ನು ಒಂದೇ ಕಡೆ ಟೈಪಿಸಲು ಸಾಧ್ಯವಾಗುವ ಕೀಲಿಮಣೆ ಸಿದ್ಧವಾಗಿದೆ. ಬೆಂಗಳೂರು ಮತ್ತು ಅಮೆರಿಕದ 'ಭಾಷಾ ಪ್ರಯೋಗಾಲಯ'ಗಳಲ್ಲಿ ಅಧ್ಯಯನ ನಡೆಸಿ ಕ-ನಾದ ಫಾನೆಟಿಕ್ಸ್‌ ತಂಡ ತಯಾರು ಮಾಡಿರುವ ಕೀಲಿಮಣೆ ಇ-ಮಾರುಕಟ್ಟೆಗೆ ಬಿಡುಗಡೆಯಾಗಿದೆ.

               ಸಾಂಪ್ರದಾಯಿಕ ಕೀಲಿಮಣೆಯು ಭಾರತೀಯ ಭಾಷೆಗಳನ್ನು ಕೊಲ್ಲುತ್ತಿದೆ ಎಂಬ ಆತಂಕವೇ ಈ ಪ್ರಯೋಗಕ್ಕೆ ಕಾರಣ. ಎಂಜಿನಿಯರ್‌ಗಳಾದ ಗುರುಪ್ರಸಾದ್ ಮತ್ತು ಸತೀಶ್ ಅಗ್ಪಾಲ ನೇತೃತ್ವದಲ್ಲಿ ತಯಾರಾಗಿರುವ ಕೀಲಿಮಣೆಯಲ್ಲಿ 10 ಭಾಷೆಗಳ ವರ್ಣಾಕ್ಷರಗಳ ಸಂಯೋಜನೆ ಇದೆ. ವಿಂಡೋಸ್, ಲಿನಕ್ಸ್, ಆಯಪಲ್ ಐಮ್ಯಾಕ್, ಆಯಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್‌ಗಳಲ್ಲೂ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌, ಟ್ಯಾಬ್‌ಗಳಲ್ಲೂ ಬಳಕೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

                'ಈಗ ಬಳಕೆಯಲ್ಲಿರುವ ಕೀಲಿಮಣೆ ಸಂಪೂರ್ಣ ಯಾಂತ್ರಿಕ. ಅದರಲ್ಲಿ ಭಾರತೀಯ ಭಾಷೆಗಳನ್ನು ಟೈಪಿಸಲು ಪ್ರಯಾಸವಾಗುತ್ತದೆ. ಬ್ರಾಹ್ಮಿ ಲಿಪಿಮೂಲದ ಸ್ಥಳೀಯ ಭಾಷೆಗಳನ್ನು ಯೋಚಿಸಿದಂತೆ ಬರೆಯಲು ಇದರಲ್ಲಿ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಭಾಷಾವಿಜ್ಞಾನವನ್ನು ನಿಕಷಕ್ಕೆ ಒಡ್ಡಿ ಈ ಕೀಲಿಮಣೆ ಸಿದ್ಧಪಡಿಸಲಾಗಿದೆ. ಬ್ರಾಹ್ಮಿ ಲಿಪಿಗೆ ಅನುಗುಣವಾದ ಸ್ವರ-ವ್ಯಂಜನಗಳ ಸಂಕಲನದ ಮೂಲಕ ಇಲ್ಲಿ ವರ್ಣಾಕ್ಷಗಳನ್ನು ವಿನ್ಯಾಸೊಳಿಸಲಾಗಿದೆ' ಎಂದು 'ಪ್ರಜಾವಾಣಿ'ಗೆ ಗುರುಪ್ರಸಾದ್ ತಿಳಿಸಿದರು.

              'ಮಾತೃಭಾಷೆಯಲ್ಲಿ ಯೋಚಿಸಿ ಇತರ ಭಾಷೆಯನ್ನು ಟೈ‍ಪ್ ಮಾಡಲು ಸಾಧ್ಯವಾಗುವುದು ಈ ಕೀಲಿಮಣೆಯ ವೈಶಿಷ್ಟ್ಯ. ಬ್ರಾಹ್ಮಿ ಲಿಪಿಯ ಆಧಾರದಲ್ಲಿ ಸಿದ್ಧಪಡಿಸಿರುವುದೇ ಇದಕ್ಕೆ ಕಾರಣ. ಬೇರೆ ಭಾಷೆಯ ಲಿಪಿ ತಿಳಿಯದೇ ಇದ್ದರೂ ನಮ್ಮದೇ ಭಾಷೆಯಲ್ಲಿ ಟೈಪಿಸಬಹುದಾದ ಕಾರಣ ಭಾರತೀಯ ಭಾಷೆಗಳನ್ನು ಕಲಿಯುವುದಕ್ಕೂ ಇದು ನೆರವಾಗಲಿದೆ' ಎಂದು ಅವರು ವಿವರಿಸಿದರು.

                ಭಾಷೆಯಿಂದ ಭಾಷೆಗೆ 'ಸ್ವಿಚ್' ಆಗಲು ಸುಲಭ ವಿಧಾನವಿದೆ. ಭಾರತೀಯ ಭಾಷೆಗಳಲ್ಲಿ ಪದಗಳ ಮಧ್ಯೆ ಅರ್ಧಾಕ್ಷರಗಳ ಬಳಕೆ (ಜೀರೊ ವಿಡ್ತ್ ನಾನ್ ಜಾಯ್ನರ್) ಪದಗಳ ಬಳಕೆ ಹೆಚ್ಚು. ಉದಾ: ತುಳು ಪದಗಳಾದ ಬಾಕಿಲ್‌ಡ್ (ಹೊಸ್ತಿಲಿನಲ್ಲಿ), ವಣಸ್‌ಗ್ (ಊಟಕ್ಕೆ). ಸಾಂಪ್ರದಾಯಿಕ ಕೀಲಿಮಣೆಯಲ್ಲಿ ಇದು ತೊಡಕುಂಟುಮಾಡುತ್ತದೆ. ಇದರಿಂದ ಭಾಷೆಯ ಸೊಗಡು ನಾಶವಾಗುತ್ತದೆ. ಹೊಸ ಕೀಲಿಮಣೆಯಲ್ಲಿ ಈ ಸಮಸ್ಯೆ ಇಲ್ಲ.

                ಕೀಲಿಮಣೆಯನ್ನು ಈಗಾಗಲೇ 80 ಸರ್ಕಾರಿ ಶಾಲೆಗಳಿಗೆ ದಾನಿಗಳ ಮೂಲಕ ವಿತರಿಸಲಾಗಿದೆ. ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ. ಮಾಹಿತಿ ಮತ್ತು ಆನ್‌ಲೈನ್ ಖರೀದಿಗೆ ka-naada.com

            ಸಾಂಪ್ರದಾಯಿಕ ಕೀಲಿಮಣೆಯಿಂದ ಸ್ಥಳೀಯ ಭಾಷೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಭಾಷೆ ಉಳಿಸಲು, ಆ ಮೂಲಕ ಲಿಪಿ ಉಳಿಸಲು ಪ್ರಯತ್ನಿಸಿದ್ದರ ಫಲವೇ ಈ ಕೀಲಿಮಣೆ. ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳು ಅನ್ನದ ಭಾಷೆಯಲ್ಲ ಎಂಬ ವಾದ ಇದೆ. ಅದು ಸರಿಯಲ್ಲ, ಮಾತೃಭಾಷೆಗಳಲ್ಲೂ ಅನ್ನದ ದಾರಿ ಕಂಡುಕೊಳ್ಳಬಹುದು ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ.

ಗುರುಪ್ರಸಾದ್, ಕ-ನಾದ ಫೊನೆಟಿಕ್ಸ್ ಸ್ಥಾಪಕ



 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries